ಸುದ್ದಿ ವಿಶ್ಲೇಷಣೆ: ಕನ್ನಡ ನಟಿಯರು ಮಾತ್ರ ಸುಂಟರಗಾಳಿಗೆ ಸಿಲುಕುತ್ತಿರುವುದೇಕೆ?
ಒಂದು ಅಂಕಿ-ಅಂಶದ ಪ್ರಕಾರ ಬೆಂಗಳೂರು ಸೇರಿ ರಾಜ್ಯದ ಅನೇಕ ಕಡೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಡ್ರಗ್ ಅನಾಯಾಸವಾಗಿ ಸಿಗುತ್ತಿದೆಯಂತೆ. ಪೊಲೀಸರಿಗೆ ನಿಜವಾಗಿಯೂ ಡ್ರಗ್ ನಿಯಂತ್ರಣ ಮಾಡಲೇಬೇಕು, ಸಮಾಜಕ್ಕೆ ಒಳಿತು ಮಾಡಬೇಕು ಎನ್ನುವ ಉದ್ದೇಶ ಇದ್ದಿದ್ದರೆ ಈ ಪ್ರಕರಣದಲ್ಲಿ ಆಳಕ್ಕೆ ಏಕೆ ಹೋಗುತ್ತಿಲ್ಲ?
ಸ್ಯಾಂಡಲ್ವುಡ್ ನಟಿಮಣಿಯರಿಗೆ ಒಂದಾದ ಮೇಲೊಂದು ಸಂಕಷ್ಟ ಎದುರಾಗುತ್ತಿದೆ. ಡ್ರಗ್ ಕೇಸ್ನಲ್ಲಿ ತುಪ್ಪದ ಬೆಡಗಿ ರಾಗಿಣಿ ಜಾಮೀನು ಸಿಗದೇ ಜೈಲಿನಲ್ಲಿದ್ದರೆ, ನಟಿ ಸಂಜನಾ ಗಲ್ರಾನಿ ಆರೋಗ್ಯದ ಕಾರಣ ನೀಡಿ ಜೈಲಿನಿಂದ ಹೊರ ಬಂದಿದ್ದಾರೆ. ಇನ್ನು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ತಳುಕು ಹಾಕಿಕೊಂಡಿದ್ದು, ವಿಚಾರಣೆಗೆ ಹಾಜರಾಗಿ ಬಂದಿದ್ದಾರೆ. ಹಾಗಾದರೆ, ಇಂಥ ಪ್ರಕರಣಗಳಲ್ಲಿ ಹೀರೋಯಿನ್ಗಳನ್ನು ಮಾತ್ರ ಗುರಿ ಮಾಡ್ತಿರೋದೆಕೆ? ಹೀಗೊಂದು ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ. ಆದರೆ ಉತ್ತರ ಮಾತ್ರ ಸಿಕ್ಕಿಲ್ಲ.
ಉದ್ದೇಶ ದಿಟವೋ? ಅಥವಾ ರಾಜಕಾರಣವೋ ರಾಜಕಾರಣದಲ್ಲಿ ಯಾರನ್ನಾದರೂ ಕೆಡವಬೇಕು ಎಂದರೆ ಅದಕ್ಕೆ ಸುಲಭ ಮಾರ್ಗ ಎಂದರೆ, ಅವರ ಮೇಲೆ ಗಂಭೀರ ಆರೋಪ ಮಾಡುವುದು. ಸರ್ಕಾರದ ಅಡಿಯಲ್ಲಿರುವ ಪೊಲೀಸ್ ಪ್ರಭಾವ ಬೀರಿ ಅವರನ್ನು ಬಂಧಿಸುವುದು. ನಂತರ ಒಂದಷ್ಟು ದಿನ ಜೈಲಿನಲ್ಲಿರಿಸಿ ಅವರನ್ನು ಬಿಡುಗಡೆ ಮಾಡುವುದು. ಹೀಗೊಂದು ಸಂಪ್ರದಾಯ ಈ ಮೊದಲಿನಿಂದಲೂ ನಡೆದು ಬಂದೇ ಇದೆ. ಈಗ, ನಟಿಯರ ಬಂಧನದ ಹಿಂದೆಯೂ ಇಂಥದ್ದೊಂದು ರಾಜಕೀಯವಿದೆಯೇ ಎನ್ನುವ ಪ್ರಶ್ನೆ ಏಳದೇ ಇರದು.
ಡ್ರಗ್ ಕೇಸ್ನಲ್ಲಿ ನಾಯಕಿಯರು ಅರೆಸ್ಟ್ ಆಗಿರುವುದನ್ನು ಪೊಲೀಸರು ಸಮರ್ಥಿಸಿಕೊಳ್ಳುತ್ತಾರೆ. ಖ್ಯಾತ ನಟಿಯರನ್ನು ಅರೆಸ್ಟ್ ಮಾಡಿದ ನಂತರ ಸಮರ್ಥನೆ ಕೊಡುವುದು ಅನಿವಾರ್ಯ ಕೂಡ. ಸ್ಯಾಂಡಲ್ವುಡ್ನಲ್ಲಿ ಮಾದಕದ್ರವ್ಯದ ಹಾವಳಿ ಹೆಚ್ಚಿದೆ. ಹೀಗಾಗಿ, ಡ್ರಗ್ ಜೊತೆ ನಂಟಿರುವವರನ್ನು ನಾವು ಬಂಧಿಸಿದ್ದೇವೆ. ಡ್ರಗ್ ಜಾಲ ನಾಶ ಮಾಡೋಕೆ ಇದು ಅನಿವಾರ್ಯ ಕೂಡ ಎನ್ನುತ್ತಾರೆ ಪೊಲೀಸರು.
ಒಂದು ಅಂಕಿ-ಅಂಶದ ಪ್ರಕಾರ ಬೆಂಗಳೂರು ಸೇರಿ ರಾಜ್ಯದ ಅನೇಕ ಕಡೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಡ್ರಗ್ ಅನಾಯಾಸವಾಗಿ ಸಿಗುತ್ತಿದೆ. ಪೊಲೀಸರಿಗೆ ನಿಜವಾಗಿಯೂ ಡ್ರಗ್ ನಿಯಂತ್ರಣ ಮಾಡಲೇಬೇಕು, ಸಮಾಜಕ್ಕೆ ಒಳಿತು ಮಾಡಬೇಕು ಎನ್ನುವ ಉದ್ದೇಶ ಇದ್ದಿದ್ದರೆ ಈ ಪ್ರಕರಣದ ಆಳಕ್ಕೆ ಏಕೆ ಹೋಗುತ್ತಿಲ್ಲ? ಈ ಡ್ರಗ್ಸ್ ಮಾಫಿಯಾ ಕುರಿತಂತೆ ವಿಧಾನ ಸಭೆಯಲ್ಲಿ ಚರ್ಚೆಯಾದಾಗ, ಕೆಲ ಶಾಸಕರು ಕಣ್ಣೀರು ಹಾಕಿದ್ದು ಈಗ ಇತಿಹಾಸ. ಪಕ್ಷ ಭೇದ ಮರೆತು ಎಲ್ಲರೂ ಆಡಳಿತ ಪಕ್ಷಕ್ಕೆ ಹೇಳಿದ್ದು ಒಂದೇ-ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ಈ ಜಾಲಕ್ಕೆ ಕಡಿವಾಣ ಹಾಕಬೇಕು. ಆಗ ಸರಕಾರ ಕೂಡ ಈ ಜಾಲದಲ್ಲಿ ಭಾಗಿಯಾದವರ ಹೆಡೆ ಮುರಿ ಕಟ್ಟುವುದು ನಿಶ್ಚಿತ ಎಂದು ಹೇಳಿತ್ತು. ಆದರೆ ಆಗಿದ್ದೆ ಬೇರೆ. ಬೆಟ್ಟ ಅಗೆದು ಕೇವಲ ಇಲಿ ಹಿಡಿಯುವ ಕೆಲಸವನ್ನೇಕೆ ಪೊಲೀಸರು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಅನೇಕರದ್ದು.
ಎರಡು ನಾಯಕಿಯರನ್ನು ಬಂಧಿಸಿ, ಸ್ಯಾಂಡಲ್ವುಡ್ನಲ್ಲಿ ಸಂಪೂರ್ಣವಾಗಿ ಡ್ರಗ್ ಅನ್ನೇ ಮಟ್ಟ ಹಾಕಿದ್ದೇವೆ ಎನ್ನುವ ಭ್ರಮೆಯನ್ನು ಜನರಲ್ಲಿ ತುಂಬಲು ಪೊಲೀಸರು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇನ್ನು, ಡ್ರಗ್ ಪೆಡ್ಲರ್ ವಿಚಾರಕ್ಕೆ ಬರೋದಾದರೆ, ಅದ್ಯಾರೋ ಪಾರ್ಟಿ ಅರೇಂಜ್ ಮಾಡಿ, ಡ್ರಗ್ ನೀಡುತ್ತಿದ್ದ ವಿರೇನ್ ಖನ್ನಾ ಸೇರಿ ಒಂದೆರಡು ಹೆಸರನ್ನು ಇಟ್ಟುಕೊಂಡು ಪೊಲೀಸರು ಅಲ್ಲಿಯೇ ಗಿರಕಿ ಹೊಡೆಯುತ್ತಿದ್ದಾರೆ. ಈ ಡ್ರಗ್ ಕೇಸ್ನ ಕಿಂಗ್ಪಿನ್ ಅರೆಸ್ಟ್ ಮಾಡೋಕೆ ಯಾರಿಗೂ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ, ಈ ಬಂಧನದ ಹಿಂದೆ ಒಂದು ಬಲವಾದ ರಾಜಕೀಯ ಉದ್ದೇಶವಿದೆ ಎನ್ನುವುದು ಕೆಲ ರಾಜಕೀಯ ಪಂಡಿತರ ಮಾತು.
ರಾಧಿಕಾ ಕುಮಾರಸ್ವಾಮಿ ವಿಚಾರಣೆ ಹಿಂದೆಯೂ ರಾಜಕೀಯ? ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ತಳಕು ಹಾಕಿಕೊಂಡಿದೆ. ನಿನ್ನೆ ಸಿಸಿಬಿ ಕಚೇರಿಗೆ ತೆರಳಿ ವಿಚಾರಣೆಗೂ ಹಾಜರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಜಾಡು ಹಿಡಿದು ಹೋದರೆ ಅದೆಷ್ಟು ದೊಡ್ಡ ದೊಡ್ಡವರು ಹೆಸರು ಹೊರ ಬರುತ್ತದೆಯೋ.. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣ ಕೇವಲ ರಾಧಿಕಾಗೆ ಮಾತ್ರ ಸೀಮಿತವಾಗಿದ್ದೇಕೆ? ಅವರ ಹೆಸರು ಕೇಳಿ ಬಂದಿರುವ ಹಿಂದೆಯೂ ಒಂದು ಬಲವಾದ ರಾಜಕೀಯ ಕಾರಣ ಇದೆಯೇ? ಎಂಬ ಅನುಮಾನ ಹುಟ್ಟಿಕೊಂಡಿದೆ.
ನಟಿಯರದ್ದೂ ತಪ್ಪಲ್ಲವೇ? ಸಾಕ್ಷ್ಯ ಇಲ್ಲದೆ ಯಾರನ್ನೂ ಬಂಧಿಸೋಕೆ ಆಗಲ್ಲ. ಹೀಗೆ ಬಂಧಿಸಿದರೂ, ನ್ಯಾಯಾಲಯಕ್ಕೆ ಸಾಕ್ಷ್ಯ ನೀಡಬೇಕು. ಒಂದೊಮ್ಮೆ ನ್ಯಾಯಾಲಯಕ್ಕೆ ಸಾಕ್ಷ್ಯ ನೀಡಿಲ್ಲ ಎಂದಾದರೆ ಛೀಮಾರಿ ಬೀಳುತ್ತದೆ. ಹೀಗಾಗಿ, ಬಂಧನಕ್ಕೆ ಒಳಗಾಗುವದಕ್ಕೂ ಮೊದಲು ಪೊಲೀಸರಿಗೂ ಒಂದಷ್ಟು ಸಾಕ್ಷ್ಯ ಸಿಕ್ಕಿರುತ್ತದೆ. ಹಾಗಾದರೆ ನಟನೆ ಮಾಡಬೇಕು ಎನ್ನುವ ಕನಸು ಹೊತ್ತು ಬರುವ ನಟಿಯರು ಮಧ್ಯದಲ್ಲಿ ದಾರಿ ತಪ್ಪೋದೇಕೆ? ನಟಿಯರು ಪಡೆವ ಅಲ್ಪ ಸಂಭಾವನೆಯಲ್ಲಿ ಬೆಂಗಳೂರಿನಂಥ ಬೆಂಗಳೂರಲ್ಲಿ ದೊಡ್ಡ ದೊಡ್ಡ ಬಂಗಲೆ ಕಟ್ಟಿ, ಐಷಾರಾಮಿ ಕಾರು ಖರಿದೋಸುದು ಹೇಗೆ? ಹೀಗೆ ಒಂದಷ್ಟು ಪ್ರಶ್ನೆಗಳು ಚಳಿಗುಳ್ಳೆಯಂತೆ ಸಾಲು ಸಾಲಾಗಿ ಏಳುತ್ತಾ ಹೋಗುತ್ತವೆ.
ಸಾಲು ಸಾಲು ನಟಿಯರು ಒಂದಾದ ಮೇಲೊಂದರಂತೆ ವಿವಾದದಲ್ಲಿ ಸಿಲುಕುತ್ತಿರುವಾಗ ಸ್ಯಾಂಡಲ್ವುಡ್ನಲ್ಲಿ ನಟಿಯರು ಕಾಲು ಜಾರಿ ಬೀಳುತ್ತಿದ್ದಾರಾ ಎಂಬ ಸಂಶಯ ಮೂಡುವುದು ಸಹಜ. ಕೇವಲ ನಟನೆ ಮತ್ತು ಪ್ರತಿಭೆ ಆಧಾರದ ಮೇಲೆ ನಟಿಯರು ಈ ಉದ್ಯಮದಲ್ಲಿ ಹೆಸರು ಮತ್ತು ಹಣ ಗಳಿಸುವುದು ಸಾಧ್ಯವಿಲ್ಲವೇ ಎಂಬ ಸಂಶಯ ಕೂಡ ಹುಟ್ಟುತ್ತಿದೆ.
ಹಾಲಿವುಡ್ನಲ್ಲಿ ಹುಟ್ಟಿ ಪ್ರಪಂಚದಾದ್ಯಂತ ವಿಸ್ತರಿಸಿದ ಪಾತ್ರಕ್ಕಾಗಿ ಪಲ್ಲಂಗ (#MeToo) ಚಳುವಳಿ ದೊಡ್ಡ ಸುಂಟರಗಾಳಿಯನ್ನೇ ಎಬ್ಬಿಸಿತ್ತು. ಬೇರೆ ಚಲನಚಿತ್ರೋದ್ಯಮದಲ್ಲಿ ಏನಾಯಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ, ಹಾಲಿವುಡ್ ಮಾತ್ರ ಅನೇಕ ಕ್ರಮಗಳನ್ನು ತೆಗೆದುಕೊಂಡಿತ್ತು. ಯಾರೂ ಮುಟ್ಟಲಾಗದ ಅತ್ಯಂತ ದೊಡ್ಡ ಉದ್ಯಮಿ ಹಾರ್ವಿ ವಿನ್ಸ್ಟೀನ್ ನಟಿಯರನ್ನು ಬಳಸಿಕೊಳ್ಳುತ್ತಿದ್ದನೋ, ಆತ ಈಗ ಕಂಬಿ ಎಣಿಸುತ್ತಿದ್ದಾನೆ. ಅಷ್ಟೇ ಅಲ್ಲ, ಮಹಿಳಾ ಕಿರುಕುಳ ಆಗದಿರಲಿ ಅಂತ, ಹಲವಾರು ನಿರ್ಮಾಣ ಸಂಸ್ಥೆಗಳು ಮಹಿಳಾ ಕ್ರಿಯಾತ್ಮಕ ಮೇಲ್ವಿಚಾರಕಿಯನ್ನು ಕಡ್ಡಾಯವಾಗಿ ನೇಮಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರ ಹೇಗಿರುತ್ತದೆ ಗೊತ್ತಾ? ನಟಿಯರಿಗೆ intimate ದೃಶ್ಯಗಳನ್ನು ವಿವರಿಸುವುದು; ಆ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ಸೆಟ್ಟಿನಲ್ಲಿ ಇದ್ದು ನಟಿಯರಿಗೆ ಯಾವುದೇ ರೀತಿಯ ಲೈಂಗಿಕ ಕಿರುಕುಳ ಆಗದಿರುವಂತೆ ನೋಡಿಕೊಳ್ಳುವುದು ಮತ್ತು ಚಿತ್ರೀಕರಣದ ಸಂದರ್ಭದಲ್ಲಿ ಕೂಡ ಯಾವ ಹಂತದಲ್ಲಿ, intimate ದೃಶ್ಯದ ಚಿತ್ರೀಕರಣ ನಿಲ್ಲಬೇಕು ಎಂಬ ನಿರ್ಣಯವನ್ನು ಆ ಮಹಿಳಾ ಮೇಲ್ವಿಚಾರಕಿ ತೆಗೆದುಕೊಳ್ಳುತ್ತಾಳೆ. ಈ ಸಂಸ್ಕೃತಿ ಭಾರತಕ್ಕೆ ಬರುವುದು ಯಾವಾಗ?
ಇಷ್ಟಕ್ಕೂ ಚಿತ್ರೀಕರಣದ ವೇಳೆ ನಡೆಯುವ ಕಿರುಕುಳ ಅಥವಾ ಚಿತ್ರೋದ್ಯಮಿ ಕಾಟ ಕೊಟ್ಟರೆ ನಟಿಮಣಿಯರಿಗೆ ಸಹಾಯ ಮಾಡುವ ವೇದಿಕೆಗಳು ಇವೆ. ಇಲ್ಲ ಎನ್ನುವಂತಿಲ್ಲ. ಆದರೆ, ಅತೀ ಆಸಗೆ ಬಿದ್ದು ಬೇರೆ ಬೇರೆ ದಾರಿ ಹುಡುಕಿ ಹಣ ಮಾಡಲು ನಟ ಅಥವಾ ನಟಿ ಇಳಿದರೆ ಆಗ ಬೇರೆ ಯಾವ ಸಹಾಯವಾಣಿಯೂ ಸಹಾಯಕ್ಕೆ ಬರಲು ಸಾಧ್ಯವಿಲ್ಲ. ಸ್ಯಾಂಡಲ್ವುಡ್ನ ನಟಿಯರು ಕೂಡ ಈ ಅಲೆಗೆ ಸಿಲುಕಿದ್ದರಿಂದ ಇಂತಹ ತೊಂದರೆ ಎದುರಾಗುತ್ತಿದೆಯೇ?
ನಟಿ ರಾಧಿಕಾ ಕುಮಾರಸ್ವಾಮಿ ಅಡ್ವಾನ್ಸ್ ತೆಗೆದುಕೊಂಡಿದ್ದ ಸಿನಿಮಾಕ್ಕೆ ಟೈಟಲ್ ರಿಜಿಸ್ಟ್ರೇಷನ್ ಆಗಿತ್ತಾ?