
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ತೂಗುದೀಪ ಅವರಿಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಬಗ್ಗೆ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ದರ್ಶನ್ ಜಾಮೀನಾಗಿ ಬಳಿಕ ಮತ್ತೆ ಬಂಧನವಾಗಿದ್ದು ಪ್ರಸ್ತುತ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದರ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇತರೆ ಖೈದಿಗಳಿಗೆ ರಾಜಾತಿಥ್ಯ ನೀಡಲಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಮೊಬೈಲ್ ಫೋನ್ ಹಿಡಿದಿರುವ ಖೈದಿಗಳು, ಜೈಲಿನಲ್ಲಿ ಖೈದಿಗಳು ಎಣ್ಣೆ ಪಾರ್ಟಿ ಮಾಡುತ್ತಿರುವ ಚಿತ್ರ, ವಿಡಿಯೋಗಳು ಹರಿದಾಡಿದ್ದವು. ಈ ಪ್ರಕರಣ ಕುರಿತಾಗಿ ದರ್ಶನ್ ಆಪ್ತ ಧನ್ವೀರ್ ಅನ್ನು ವಿಚಾರಣೆ ಮಾಡಲಾಗಿತ್ತು. ಆದರೆ ಈಗ ಧನ್ವೀರ್, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದರೆ ಎಂಬ ಅನುಮಾನ ಮೂಡಿದೆ.
ಜೈಲಿನಲ್ಲಿ ಇತರೆ ಖೈದಿಗಳಿಗೆ ವಿಶೇಷ ಸವಲತ್ತು ನೀಡುತ್ತಿರುವ ಚಿತ್ರ ಹಾಗೂ ವಿಡಿಯೋಗಳನ್ನು ಧನ್ವೀರ್ ಅವರೇ ಹಂಚಿಕೊಂಡಿದ್ದರು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು ಈ ಬಗ್ಗೆ ಧನ್ವೀರ್ ಅವರ ವಿಚಾರಣೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ವೀರ್ ಅವರ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದ ಪೊಲೀಸರು ಡಾಟಾ ರಿಟ್ರೀವ್ ಮಾಡಲು ಸೈಬರ್ ಸೆಲ್ನ ಲ್ಯಾಬ್ಗೆ ಕಳುಹಿಸಿದ್ದರು. ಇದೀಗ ಲ್ಯಾಬ್ ವರದಿ ಬಂದಾಗಿದೆ. ಆದರೆ ಧನ್ವೀರ್ ಮೊಬೈಲ್ನಿಂದ ಯಾವುದೇ ಡಾಟಾ ರಿಕವರಿ ಆಗಿಲ್ಲ.
ಪೊಲೀಸರಿಗೆ ಮೊಬೈಲ್ ನೀಡುವ ಮೊದಲೇ ಧನ್ವೀರ್ ಅವರು ಫೋನಿನಲ್ಲಿದ್ದ ಎಲ್ಲ ಡಾಟಾ ಅನ್ನು ಎರೇಸ್ ಮಾಡಿದ್ದರೆ ಎಂಬ ಅನುಮಾನ ಮೂಡಿದೆ. ಅಥವಾ ಬೇರೊಂದು ಫೋನನ್ನು ಪೊಲೀಸರಿಗೆ ನೀಡಿದರೆ ಎಂಬ ಅನುಮಾನವೂ ಪೊಲೀಸರಿಗಿದೆ. ಪೊಲೀಸರು ಇದೀಗ ಎಫ್ಎಸ್ಎಲ್ ವರದಿಗಾಗಿ ನಿರೀಕ್ಷೆ ಮಾಡುತ್ತಿದ್ದಾರೆ. ಎಫ್ಎಸ್ಎಲ್ ವರದಿ ಬಂದ ಬಳಿಕ ಚಾರ್ಜ್ಶೀಟ್ನಲ್ಲಿ ಧನ್ವೀರ್ ವಿರುದ್ಧ ಸಾಕ್ಷ್ಯನಾಶದ ಕೇಸು ದಾಖಲಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ನೀವು ನನ್ನ ಶಕ್ತಿ; ‘ಡೆವಿಲ್’ ರಿಲೀಸ್ಗೂ ಮೊದಲು ಅಭಿಮಾನಿಗಳಿಗೆ ದರ್ಶನ್ ಪತ್ರ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದಾಗಿನಿಂದಲೂ ಧನ್ವೀರ್ ಗೌಡ, ದರ್ಶನ್ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ದರ್ಶನ್ಗೆ ಬಹಳ ಆಪ್ತರಾಗಿರುವ ಧನ್ವೀರ್ ಗೌಡ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆ, ವಕೀಲರ ನೇಮಕ ಇನ್ನಿತರೆ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದರ್ಶನ್, ಬಳ್ಳಾರಿ ಜೈಲಿನಲ್ಲಿದ್ದಾಗಲೂ ಸಹ ಕೆಲವು ಬಾರಿ ಜೈಲಿಗೆ ಭೇಟಿ ನೀಡಿದ್ದರು. ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೂ ಅವರ ಭೇಟಿ ಮಾಡುತ್ತಲೇ ಇರುತ್ತಾರೆ. ಆದರೆ ಇದೀಗ ಅವರ ಕೊರಳಿಗೆ ಪ್ರಕರಣವೊಂದು ಸುತ್ತಿಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:08 am, Wed, 10 December 25