
ಕನ್ನಡ ಚಿತ್ರರಂಗಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು ನೀಡಿದ ಕೊಡುಗೆ ದೊಡ್ಡದು. ಅವರ ನಿರ್ದೇಶನದಲ್ಲಿ ಮೂಡಿಬಂದ ‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿವೆ. ಈ ಸಿನಿಮಾಗಳಿಂದಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ಚಾರ್ಮ್ ಸಿಕ್ಕಿದೆ. ಪರಭಾಷೆ ಮಂದಿ ಕೂಡ ಸ್ಯಾಂಡಲ್ವುಡ್ ಕಡೆಗೆ ತಿರುಗಿ ನೋಡುವಂತಾಗಿದೆ. ಆದರೆ ಈಗ ಒಂದು ವಿಚಾರಕ್ಕೆ ಕನ್ನಡಿಗರಿಗೆ ಬೇಸರ ಉಂಟಾಗಿದೆ. ಯಶ್ (Yash) ಹುಟ್ಟುಹಬ್ಬಕ್ಕೆ ಶುಭಕೋರಿರುವ ಪ್ರಶಾಂತ್ ನೀಲ್ ಅವರು ಉರ್ದು (Urdu) ಸಾಲುಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡು ಕನ್ನಡಿಗರು ಗರಂ ಆಗಿದ್ದಾರೆ. ಕನ್ನಡ ಮರೆತು ಹೋಯ್ತಾ ಎಂದು ಕೆಲವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಜನವರಿ 8ರಂದು ಯಶ್ ಹುಟ್ಟುಹಬ್ಬ. ಯಶ್ ಜೊತೆ ಇರುವ ತಮ್ಮ ಫೋಟೋವನ್ನು ಪ್ರಶಾಂತ್ ನೀಲ್ ಅವರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಬರುವ ಒಂದು ಉರ್ದು ಡೈಲಾಗ್ ಅನ್ನು ಅವರು ಈ ಫೋಟೋಗೆ ಕ್ಯಾಪ್ಷನ್ ಆಗಿ ನೀಡಿದ್ದಾರೆ. ಇದರಿಂದ ಕನ್ನಡದ ಅಭಿಮಾನಿಗಳಿಗೆ ಬೇಸರ ಆಗಿದೆ. ಕನ್ನಡದಲ್ಲೇ ವಿಶ್ ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Yash 19: ಯಶ್ 19ನೇ ಚಿತ್ರಕ್ಕೆ ‘ಕೆವಿಎನ್’ ಬಂಡವಾಳ: ‘ರಾಕಿಂಗ್ ಸ್ಟಾರ್’ ಬರ್ತ್ಡೇ ದಿನವೇ ಸಿಹಿ ಸುದ್ದಿ
ಕೆಲವೊಂದು ವಿಚಾರಕ್ಕೆ ಪ್ರಶಾಂತ್ ನೀಲ್ ಅವರನ್ನು ಕನ್ನಡಿಗರು ವಿರೋಧಿಸೋದುಂಟು. ‘ಕೆಜಿಎಫ್ 2’ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಅವರು ಬೇರೆ ಭಾಷೆಯ ಸ್ಟಾರ್ ಕಲಾವಿದರ ಜೊತೆ ಕೈ ಜೋಡಿಸಿದ್ದಾರೆ ಎಂಬುದು ಕೂಡ ಅದಕ್ಕೆ ಒಂದು ಕಾರಣ. ‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಆ ಬಳಿಕ ಅವರು ಜೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ. ಕನ್ನಡದ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಕರುನಾಡಿನಲ್ಲಿರುವ ಅಭಿಮಾನಿಗಳ ಅಭಿಪ್ರಾಯ.
‘ಕೆಜಿಎಫ್: ಚಾಪ್ಟರ್ 2’ ಸಾರ್ವಕಾಲಿಕ ಹಿಟ್ ಆಗಿದ್ದರಿಂದ ಅದರ ಮುಂದುವರಿದ ಭಾಗದ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇದೆ. ‘ಕೆಜಿಎಫ್ 3’ ಬರಲಿದೆ ಎಂಬುದು ಖಚಿತವಾಗಿದೆ. ಆದರೆ ಅದಕ್ಕಾಗಿ ಸಿನಿಪ್ರಿಯರು ಇನ್ನೂ ಕಾಯಬೇಕಿದೆ. ಆದಷ್ಟು ಬೇಗ ಪ್ರಶಾಂತ್ ನೀಲ್ ಅವರು ‘ಕೆಜಿಎಫ್: ಚಾಪ್ಟರ್ 3’ ಸಿನಿಮಾದ ಕೆಲಸಗಳತ್ತ ಗಮನ ಹರಿಸಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ ಅವರು ಬೇರೆ ಸಿನಿಮಾದಲ್ಲಿ ಬ್ಯುಸಿ ಆಗಿರುವುದರಿಂದ ‘ಕೆಜಿಎಫ್ 3’ ಸೆಟ್ಟೇರುವುದು ಸಹಜವಾಗಿಯೇ ವಿಳಂಬ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.