
ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸುದೀಪ್ ಅವರ ‘ಮ್ಯಾಕ್ಸ್’ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಮತ್ತೆ ಡಿಸೆಂಬರ್ಗೆ ‘ಮಾರ್ಕ್’ ಆಗಿ ಬರುತ್ತಿರುವ ಸುದೀಪ್ ಬರುತ್ತಿದ್ದು ಇದು ಸಹ ದೊಡ್ಡ ಹಿಟ್ ಆಗುವ ನಿರೀಕ್ಷೆ ಮೂಡಿಸಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಗಮನ ಸೆಳೆಯುತ್ತಿದೆ. ‘ಮಾರ್ಕ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಸುದೀಪ್ ಅವರ ಹೊಸ ಸಿನಿಮಾದ ಘೋಷಣೆ ಆಗಿದೆ. ಘೋಷಣೆ ಮಾಡಿರುವುದು ನಿರ್ದೇಶಕ ಪ್ರೇಮ್. ಇದು ಸುದೀಪ್ ಅಭಿಮಾನಿಗಳಿಗೆ ಗೊಂದಲ ಮತ್ತು ಭಯ ಮೂಡಿಸಿದೆ.
ಪ್ರೇಮ್ ಅವರು ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ‘ಜೋಗಿ’, ‘ಎಕ್ಸ್ಕ್ಯೂಸ್ ಮೀ’, ‘ಕರಿಯ’ ಅಂಥಹಾ ಕಲ್ಟ್ ಸಿನಿಮಾಗಳನ್ನು ಸಹ ಪ್ರೇಮ್ ನೀಡಿದ್ದಾರೆ. ಆದರೆ ಇತ್ತೀಚೆಗೆ ಯಾಕೋ ಪ್ರೇಮ್ ಅವರು ತಮ್ಮ ಮ್ಯಾಜಿಕ್ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರು ನಿರ್ದೇಶನ ಮಾಡಿರುವ ಸಿನಿಮಾಗಳು ಒಂದರ ಹಿಂದೊಂದರಂತೆ ವಿಫಲವಾಗುತ್ತಿವೆ. ಈಗ ಸುದೀಪ್ ಸಿನಿಮಾ ಬೇರೆ ಘೋಷಣೆ ಮಾಡಿದ್ದಾರೆ. ಇದು ಸಹಜವಾಗಿಯೇ ಸುದೀಪ್ ಅಭಿಮಾನಿಗಳಿಗೆ ಭಯ ಮೂಡಿಸಿದೆ.
ಅಸಲಿಗೆ ಈ ಹಿಂದೆ ‘ವಿಲನ್’ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾಕ್ಕೆ ಭಾರಿ ಪ್ರಚಾರ ನೀಡಲಾಗಿತ್ತು, ಭಾರಿ ನಿರೀಕ್ಷೆಗಳನ್ನು ಸಿನಿಮಾ ಮೇಲೆ ಇರಿಸಲಾಗಿತ್ತು. ಆದರೆ ಬಹಳ ವೀಕ್ ಆದ ಕತೆ, ನಿರೂಪಣೆಯಿಂದಾಗಿ ಸಿನಿಮಾ ಸೋತಿತು. ಹಾಡುಗಳು, ಸುದೀಪ್ ಮತ್ತು ಶಿವಣ್ಣನ ನಟನೆಯ ಹೊರತಾಗಿ ಸಿನಿಮಾನಲ್ಲಿ ಇನ್ಯಾವುದೂ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ಸಿನಿಮಾದ ಬಗ್ಗೆ ಆಗ ವ್ಯಕ್ತವಾಗಿತ್ತು.
ಇದನ್ನೂ ಓದಿ:‘ಮಾರ್ಕ್’ ಎಷ್ಟು ದೊಡ್ಡ ಸಿನಿಮಾ? ವಿವರಿಸಿದ ಕಿಚ್ಚ ಸುದೀಪ್
‘ವಿಲನ್’ ಬಳಿಕ ಶಿವಣ್ಣ ಮತ್ತು ಸುದೀಪ್ ಮತ್ತೆ ಪ್ರೇಮ್ ಅವರ ಸಿನಿಮಾ ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಇತ್ತು. ಆದರೆ ಈಗ ಪ್ರೇಮ್ ಅವರೇ ಖುದ್ದಾಗಿ ತಾವು ಸುದೀಪ್ ಅವರ ಸಿನಿಮಾ ನಿರ್ದೇಶನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಅವರು ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮ್ ಅವರು ದರ್ಶನ್ ಜೊತೆಗೆ ಸಿನಿಮಾ ಒಂದನ್ನು ಮಾಡಬೇಕಿತ್ತು, ದರ್ಶನ್, ಜೈಲಿನಲ್ಲಿರುವ ಕಾರಣ ಇದೀಗ ಅದೇ ಕತೆಯನ್ನು ಸುದೀಪ್ ಅವರಿಗಾಗಿ ಮಾಡುತ್ತಿದ್ದಾರೆಯೇ? ಕಾದು ನೋಡಬೇಕಿದೆ.
ಇನ್ನು ಸುದೀಪ್ ಅವರು ಕೆಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬಿಲ್ಲ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಜಾರಿಯಲ್ಲಿದೆ. ಅದರ ಬಳಿಕ ಸಂತೋಷ್ ಆನಂದ್ರಾಮ್ ನಿರ್ದೇಶನದ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ. ಕೆಆರ್ಜಿ ನಿರ್ಮಾಣ ಮಾಡಲಿರುವ ಸಿನಿಮಾನಲ್ಲಿಯೂ ಸುದೀಪ್ ನಟಿಸಲಿದ್ದಾರೆ. ಇವುಗಳ ಜೊತೆಗೆ ತಮಿಳಿನ ನಿರ್ದೇಶಕ ನಿರ್ದೇಶಿಸಲಿರುವ ಸಿನಿಮಾನಲ್ಲಿಯೂ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ