ಸಹ ಕೈದಿಗಳಿಗೆ ದರ್ಶನ್ ದೈಹಿಕ ಕಿರುಕುಳ; ಸೆಲ್ನಲ್ಲೇ ನಡೆಯಿತು ದೊಡ್ಡ ಜಗಳ
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ. ಜೈಲಿನಲ್ಲಿ ಹೊಸ, ಕಠಿಣ ನಿಯಮಗಳು ಜಾರಿಯಲ್ಲಿದ್ದು, ದರ್ಶನ್ ತತ್ತರಿಸಿ ಹೋಗಿದ್ದಾರೆ. ಸಹ ಕೈದಿಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದ್ದು, ದೊಡ್ಡ ಜಗಳಗಳು ನಡೆದಿವೆ. ದರ್ಶನ್ ಸೆಲ್ ಮೇಲೆ ವಿಶೇಷ ನಿಗಾ ಇರಿಸಲಾಗಿದೆ.

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಆರಂಭದಲ್ಲಿ ಜಾಮೀನು ಪಡೆದು ಹಾಯಾಗಿ ಹೊರಗೆ ಸುತ್ತಾಡಿಕೊಂಡಿದ್ದ ಅವರು ಸುಪ್ರೀಂಕೋರ್ಟ್ ಬೇಲ್ ರದ್ದು ಮಾಡುತ್ತಿದ್ದಂತೆ ಮರಳಿ ಜೈಲು ಸೇರಿದ್ದಾರೆ. ಈಗ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಿಯಮಗಳು ಕಠಿಣವಾಗಿದ್ದು, ದರ್ಶನ್ ತತ್ತರಿಸಿ ಹೋಗಿದ್ದಾರಂತೆ. ಸಹ ಕೈದಿಗಳಿಗೆ ಅವರು ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ಜೈಲಿನಲ್ಲಿ ಕಠಿಣ ನಿಯಮ
ದರ್ಶನ್ ಈ ಬಾರಿ ಜೈಲು ಸೇರಿದಾಗಿನಿಂದಲೂ ಕಠಿಣ ನಿಯಮ ಜಾರಿಯಲ್ಲಿದೆ. ಅಲ್ಲದೆ, ಇತ್ತೀಚೆಗೆ ಜೈಲಿನ ಪಾರ್ಟಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲವೂ ಬದಲಾಗಿದೆ. ಐಪಿಎಸ್ ಅಧಿಕಾರಿ ಅಂಶು ಕುಮಾರ್ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದು, ಜೈಲಿನಲ್ಲಿ ಅತಿ ಕಠಿಣ ರೂಲ್ಸ್ ಜಾರಿಗೆ ತಂದಿದ್ದಾರೆ. ದರ್ಶನ್ ಅವರು ಸಾಲಿನಲ್ಲಿ ನಿಂತು ತಾವೇ ಊಟ ತೆಗೆದುಕೊಂಡು ಬರಬೇಕಿದೆ. ಒಳಗಿನ ಶೌಚಾಲಯ ಕೂಡ ತಾವೇ ಕ್ಲೀನ್ ಮಾಡಬೇಕಿದೆ. ಈ ನಿಯಮಗಳಿಂದ ದರ್ಶನ್ ತತ್ತರಿಸಿ ಹೋಗಿದ್ದಾರೆ.
ದರ್ಶನ್ ಜೊತೆ ಯಾರ್ಯಾರು ಇದ್ದಾರೆ?
ದರ್ಶನ್ ಜೊತೆ ಒಂದೇ ಸೆಲ್‌ನಲ್ಲಿ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಇದ್ದಾರೆ. ಇವರೆಲ್ಲರೂ ರೇಣುಕಾಸ್ವಾಮಿ ಕೊಲೆ ಕೇಸ್ ಅಲ್ಲಿ ಜೈಲು ಸೇರಿದವರೇ. ನಾಗರಾಜು ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ದೊಡ್ಡ ಜಗಳ
ಕೆಲ ದಿನದ ಹಿಂದೆ ದರ್ಶನ್ ಸೆಲ್‌ನಲ್ಲಿ ದೊಡ್ಡ ಜಗಳ ನಡೆದು ಹೋಗಿದೆ. ಜಗ್ಗ ಹಾಗೂ ದರ್ಶನ್ ಮಧ್ಯೆ ದೊಡ್ಡ ಜಗಳ ಆಗಿದೆಯಂತೆ. ಇಬ್ಬರ ಜಗಳ ಜೋರಾಗುತ್ತಿದ್ದಂತೆ ಜೈಲಧಿಕಾರಿಗಳು ಬಂದು ಜಗಳ ಬಿಡಿಸಿದ್ದಾರೆ. ಇನ್ನು, ಮಲಗಿದ್ದ ಸಹ ಕೈದಿಗಳನ್ನು ಕಾಲಿನಲ್ಲಿ ಒದ್ದು ಎಬ್ಬಿಸಿರೋ ದರ್ಶನ್ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಸಂಕಷ್ಟಕ್ಕೆ ಕಾರಣ ಆಯ್ತು ಪ್ರದೋಷ್ ಹೇಳಿಕೆ
ಇಲ್ಲೇ ಇದ್ರೆ ಸಾಯ್ತೀನಿ ಎಂದ ಅನುಕುಮಾರ್
ವಕೀಲರ ನೇಮಕ ವಿಚಾರವಾಗಿಯೂ ಎಲ್ಲರ ನಡುವೆ ಗಲಾಟೆ ಶುರುವಾಗಿದೆ. ಅಲ್ಲದೇ ನಾನು ಇಲ್ಲೆ ಇದ್ದರೆ ಸಾಯೋದಾಗಿ ಅನುಕುಮಾರ್ ಹೇಳಿಕೊಂಡಿದ್ದಾರಂತೆ. ಅನುಕುಮಾರ್ಗೆ ಜಾಮೀನು ಸಿಗುತ್ತಿಲ್ಲ ಎಂಬುದು ಒಂದು ಕಡೆಯಾದರೆ, ದರ್ಶನ್ ಚಿತ್ರಹಿಂಸೆ ತಡೆಯಲಾಗುತ್ತಿಲ್ಲ ಅನ್ನೋದು ಮತ್ತೊಂದು ಕಡೆ. ಹೀಗಾಗಿ, ದರ್ಶನ್ ಸೆಲ್ ಮೇಲೆ ವಿಶೇಷ ಕಾಳಜಿ ಇಡಲಾಗಿದೆ. ಟಾರ್ಚರ್ ತಡೆಯಲಾರದೆ ಅನುಕುಮಾರ್, ಜಗದೀಶ್ ಅವರು ತಮ್ಮನ್ನು ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:48 am, Mon, 8 December 25



