
‘ಬಹದ್ದೂರ್’, ‘ಭರ್ಜರಿ’, ‘ಭರಾಟೆ’ ಸಿನಿಮಾ ನಿರ್ದೇಶನ ಮಾಡುವ ಮೂಲಕ ಸಾಕಷ್ಟು ಹೆಸರು ಮಾಡಿರುವ ಚೇತನ್ ಕುಮಾರ್ ಈಗ ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇಂದು ಸ್ವಾತಂತ್ರ್ಯ ದಿನಾಚರಣೆ. ಈ ಪ್ರಯುಕ್ತ ಒಂದು ಪವರ್ಫುಲ್ ಪೋಸ್ಟರ್ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸೈನಿಕರ ಮಧ್ಯದಲ್ಲಿ ಪುನೀತ್ ರಾಜ್ಕುಮಾರ್ ನಿಂತಿದ್ದಾರೆ. ಸೈನಿಕರ ಜತೆ ಪುನೀತ್ ಕೂಡ ಕಪ್ಪನೆಯ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರೆ. ‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಎನ್ನುವ ಕ್ಯಾಪ್ಶನ್ಅನ್ನು ಪೋಸ್ಟರ್ಗೆ ನೀಡಲಾಗಿದೆ.
‘ಜೇಮ್ಸ್’ ಸಿನಿಮಾ ಘೋಷಣೆ ಆಗಿ ಹಲವು ತಿಂಗಳೇ ಕಳೆದಿವೆ. ಈ ವರೆಗೆ ಚಿತ್ರತಂಡದಿಂದ ಯಾವುದೇ ಅಪ್ಡೆಟ್ ಸಿಕ್ಕಿರಲಿಲ್ಲ. ಆದರೆ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿದೆ. ಈ ಪೊಸ್ಟರ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಪುನೀತ್ ರಾಜ್ಕುಮಾರ್ ಕೊನೆಯ ಬಾರಿ ಕಾಣಿಸಿಕೊಂಡಿದ್ದ ‘ಯುವರತ್ನ’ ಸಿನಿಮಾದಲ್ಲಿ ಶಿಕ್ಷಣದ ಬಗ್ಗೆ ಒಂದೊಳ್ಳೆಯ ಸಂದೇಶ ಇತ್ತು. ಜತೆಗೆ ಡ್ರಗ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಚಿತ್ರತಂಡ ಮಾಡಿತ್ತು. ಈ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಕೊವಿಡ್ ಎರಡನೇ ಅಲೆ ಜೋರಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಮುಂದಾದ ಸರ್ಕಾರ, ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಹೀಗಾಗಿ ಒಂದೇ ವಾರದಲ್ಲಿ ಸಿನಿಮಾ ಅಮೇಜಾನ್ ಪ್ರೈಮ್ನಲ್ಲಿ ಪ್ರಸಾರವಾಯಿತು. ಇದು ಪುನೀತ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹೀಗಾಗಿ, ‘ಜೇಮ್ಸ್’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ ಫ್ಯಾನ್ಸ್.
ಇನ್ನು, ಚೇತನ್ ಕುಮಾರ್ ಸಿನಿಮಾಗಳು ಮಾಸ್ ಡೈಲಾಗ್ ಹಾಗೂ ಆ್ಯಕ್ಷನ್ಗೆ ಫೇಮಸ್. ‘ಜೇಮ್ಸ್’ ಸಿನಿಮಾದಲ್ಲೂ ಇದು ಮುಂದುವರಿಯಲಿದೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಶೀಘ್ರವೇ ಸಿನಿಮಾ ಬಗ್ಗೆ ಹೊಸಹೊಸ ಅಪ್ಡೇಟ್ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ‘ದ್ವಿತ್ವ’ ಚಿತ್ರಕ್ಕೆ ನಾಯಕಿಯಾದ ತ್ರಿಷಾ ಕೃಷ್ಣನ್
‘ನಾನ್ ಒಳ್ಳೆಯವ್ನೇ, ಆದ್ರೆ ನನ್ ಟೈಮ್ ಸರಿಯಿಲ್ಲ’ ಅಂತಿದಾರೆ ಪುನೀತ್ ರಾಜ್ಕುಮಾರ್; ಇದಕ್ಕೊಂದು ವಿಶೇಷ ಕಾರಣವಿದೆ!