ವರನಟ ರಾಜ್ಕುಮಾರ್ ಜತೆಗೆ ಹಿರಿಯ ನಟಿ ಜಯಂತಿ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ರಾಜ್ ಫ್ಯಾಮಿಲಿಗೆ ಜಯಂತಿ ತುಂಬಾನೇ ಹತ್ತಿರದವರಾಗಿದ್ದರು. ಈಗ ಅವರ ಸಾವಿಗೆ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಕಂಬನಿ ಮಿಡಿದಿದ್ದಾರೆ.
‘ಜಯಂತಿ ಅಮ್ಮಾವ್ರು ಭಾರತೀಯ ಚಿತ್ರರಂಗದಲ್ಲಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಮ್ಮ ತಂದೆಯವರ ಜೊತೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾದಂಥವರು. ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು. ಅಪ್ಪಾಜಿ ಕಾಡಿಗೆ ಹೋಗಿದ್ದಂತಹ ಸಂದರ್ಭದಲ್ಲಿ ನಿತ್ಯ ಕರೆ ಮಾಡಿ ನಮ್ಮ ಕುಟುಂಬದ ಯೋಗಕ್ಷೇಮ ವಿಚಾರಿಸುತ್ತಿದ್ದರು. ನಮಗೆ ಒಳ್ಳೆಯದಾಗಲಿ ಅಂತ ಪೂಜೆಗಳನ್ನ ಮಾಡಿಸುತ್ತಿದ್ದರು’ ಎಂದು ಪತ್ರ ಆರಂಭಿಸಿದ್ದಾರೆ ಪುನೀತ್.
‘ಅವರ ಜೊತೆ ನಾನು ‘ರಾಜ್’ ಸಿನಿಮಾದಲ್ಲಿ ಅಭಿನಯಿಸಿದ್ದು ನನ್ನ ಭಾಗ್ಯ. ಇವತ್ತು ಅವರನ್ನು ಕಳೆದುಕೊಂಡಿರುವುದು ನನಗೆ ಮತ್ತು ನಮ್ಮ ಕುಟುಂಬಕ್ಕೆ ತುಂಬಾ ನೋವುಂಟು ಮಾಡಿದೆ. ಅವರ ನೆನಪುಗಳು ನಮ್ಮೊಳಗೆ ಸದಾ ಜೀವಂತ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ. ಓಂ ಶಾಂತಿ ಎಂದು ಪುನೀತ್ ರಾಜ್ಕುಮಾರ್ ಬರೆದುಕೊಂಡಿದ್ದಾರೆ.
— Puneeth Rajkumar (@PuneethRajkumar) July 26, 2021
‘ಅಭಿನಯ ಶಾರದೆ ಜಯಂತಿ ಅಮ್ಮ ಅವರು ವಿಧಿವಶರಾಗಿದ್ದಾರೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾದದ್ದು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
ಕನ್ನಡ,ತೆಲಗು,ತಮಿಳು,ಮಲಯಾಳಂ,ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಇಂದು (ಜು.26) ಮುಂಜಾನೆ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದರು. ಸಾಯುವುದಕ್ಕೂ ಮೊದಲು ಅವರು ಕಣ್ಣುಗಳನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಅಂತೆಯೇ ಈಗ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
ರಾಜ್ಕುಮಾರ್ ಹಾಗೂ ಜಯಂತಿ ಒಟ್ಟಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ರಾಜ್ಕುಮಾರ್ ಅವರು ಕಣ್ಣುಗಳನ್ನು ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಈಗ ಜಯಂತಿ ಕೂಡ ಈ ಸಾಲಿಗೆ ಸೇರಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ.
ಇದನ್ನೂ ಓದಿ:ಸಾವಿನಲ್ಲೂ ಸಾರ್ಥಕತೆ ಕಂಡ ಜಯಂತಿ; ಕಣ್ಣುಗಳನ್ನು ದಾನ ಮಾಡಿದ ಹಿರಿಯ ನಟಿ
Actress Jayanthi Funeral: ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟಿ ಜಯಂತಿ
Published On - 6:11 pm, Mon, 26 July 21