ಸಾವಿನಲ್ಲೂ ಸಾರ್ಥಕತೆ ಕಂಡ ಜಯಂತಿ; ಕಣ್ಣುಗಳನ್ನು ದಾನ ಮಾಡಿದ ಹಿರಿಯ ನಟಿ
ಕನ್ನಡ,ತೆಲಗು,ತಮಿಳು,ಮಲಯಾಳಂ,ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಇಂದು (ಜು.26) ಮುಂಜಾನೆ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಜಯಂತಿ ಅವರು ಸೋಮವಾರ (ಜು.26) ನಿಧನರಾಗಿದ್ದಾರೆ. ಅವರ ಸಾವಿನಿಂದ ಸ್ಯಾಂಡಲ್ವುಡ್ಗೆ ಸೂತಕದ ಛಾಯೆ ಆವರಿಸಿದೆ. ಈ ಮಧ್ಯೆ ಜಯಂತಿ ಅವರು ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ. ಈ ವಿಚಾರ ತಿಳಿದು ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ,ತೆಲಗು,ತಮಿಳು,ಮಲಯಾಳಂ,ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಇಂದು (ಜು.26) ಮುಂಜಾನೆ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದರು. ಸಾಯುವುದಕ್ಕೂ ಮೊದಲು ಅವರು ಕಣ್ಣುಗಳನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಅಂತೆಯೇ ಈಗ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
ರಾಜ್ಕುಮಾರ್ ಹಾಗೂ ಜಯಂತಿ ಒಟ್ಟಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ರಾಜ್ಕುಮಾರ್ ಅವರು ಕಣ್ಣುಗಳನ್ನು ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಈಗ ಜಯಂತಿ ಕೂಡ ಈ ಸಾಲಿಗೆ ಸೇರಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ.
ಜಯಂತಿ ಸಾವಿಗೆ ಸಾಕಷ್ಟು ಜನರು ಕಂಬನಿ ಮಿಡಿದಿದ್ದಾರೆ. ‘ಬಹುಭಾಷಾ ನಟಿ, ಅಭಿನಯ ಶಾರದೆ ಜಯಂತಿ ಅಮ್ಮಾವ್ರು ಇಂದು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ದೇವರು ಅವರ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ’ ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.
‘ಅಮ್ಮ ಯಾವಾಗಲೂ ಜನರ ಜೊತೆ ಬೆರೆಯುತ್ತಿದ್ದರು. ಅದು ಅವರಿಗೆ ಹೆಚ್ಚು ಖುಷಿ ನೀಡುತ್ತಿತ್ತು. ಫ್ಯಾಮಿಲಿ ಎಂದರೆ ಅವರಿಗೆ ಕೇವಲ ರಕ್ತ ಸಂಬಂಧ ಮಾತ್ರ ಅಲ್ಲ. ಇಡೀ ಚಿತ್ರರಂಗವೇ ಅವರ ಕುಟುಂಬವಾಗಿತ್ತು. ಎಲ್ಲರ ಬಗ್ಗೆ ಪ್ರೀತಿ ಇತ್ತು. ಇತ್ತೀಚೆಗೆ ಪ್ರತಿದಿನ ಹಳೇ ಹಾಡುಗಳನ್ನು ಕೇಳುತ್ತಿದ್ದರು. ತಮ್ಮ ಚಿತ್ರರಂಗದ ಸ್ನೇಹಿತರ ಹಾಡುಗಳನ್ನು ನೋಡುತ್ತ ಕಾಲ ಕಳೆಯುತ್ತಿದ್ದರು. ಸರೋಜಾದೇವಿ, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಶ್ರುತಿ, ತಾರಾ, ಗಿರಿಜಾ ಲೋಕೇಶ್ ಮುಂತಾದವರು ತುಂಬ ಹತ್ತಿರದವರಾಗಿದ್ದರು. ಅವರ ಜೊತೆ ಆಗಾಗ ಫೋನ್ನಲ್ಲಿ ಮಾತನಾಡುತ್ತಿದ್ದರು’ ಎಂದು ತಾಯಿಯ ಕೊನೇ ದಿನಗಳ ಬಗ್ಗೆ ಮಗ ಕೃಷ್ಣ ಕುಮಾರ್ ಮಾತನಾಡಿದ್ದಾರೆ.
ಇದನ್ನೂ ಓದಿ: ‘ಅಭಿನಯ ಶಾರದೆ’ ಜಯಂತಿ ಆತ್ಮಕ್ಕೆ ಶಾಂತಿ ಕೋರಿದ ಮಾಜಿ ಸೊಸೆ, ನಟಿ ಅನು ಪ್ರಭಾಕರ್