‘ಅಭಿನಯ ಶಾರದೆ’ ಜಯಂತಿ ಆತ್ಮಕ್ಕೆ ಶಾಂತಿ ಕೋರಿದ ಮಾಜಿ ಸೊಸೆ, ನಟಿ ಅನು ಪ್ರಭಾಕರ್
‘ನಿಮ್ಮ ಜೊತೆ ಕಳೆದಂತಹ ಪ್ರತಿ ಕ್ಷಣ ಸದಾ ನನ್ನ ಮನಸು ಹಾಗು ಹೃದಯದಲ್ಲಿ ಇರುತ್ತೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪೋಸ್ಟ್ ಮಾಡುವ ಮೂಲಕ ಜಯಂತಿ ನಿಧನಕ್ಕೆ ಅನು ಪ್ರಭಾಕರ್ ಕಂಬನಿ ಮಿಡಿದಿದ್ದಾರೆ.
ಅನಾರೋಗ್ಯದಿಂದ ಸೋಮವಾರ (ಜು.26) ಮುಂಜಾನೆ ನಿಧನರಾದ ಹಿರಿಯ ನಟಿ ಜಯಂತಿ (Abhinaya Sharade Jayanthi) ಅವರಿಗೆ ಅನೇಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕೀಯ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಮತ್ತು ಆಪ್ತರು ಜಯಂತಿ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟಿ, ಜಯಂತಿ ಅವರ ಮಾಜಿ ಸೊಸೆ ಅನು ಪ್ರಭಾಕರ್ (Anu Prabhakar) ಕೂಡ ನುಡಿ ನಮನ ಸಲ್ಲಿಸಿದ್ದಾರೆ. ಜಯಂತಿ ಜೊತೆ ತಾವಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ. ಆ ಮೂಲಕ ಜಯಂತಿಗೆ ಭಾವುಕ ವಿದಾಯ ಹೇಳಿದ್ದಾರೆ.
‘ನಿಮ್ಮ ಜೊತೆ ಕಳೆದಂತಹ ಪ್ರತಿ ಕ್ಷಣ ಸದಾ ನನ್ನ ಮನಸು ಹಾಗು ಹೃದಯದಲ್ಲಿ ಇರುತ್ತೆ. ನಿಮ್ಮಿಂದ ಕಲಿತ ಜೀವನದ ಪಾಠಗಳನ್ನು ನಾನು ಎಂದೂ ಮರೆಯೋಲ್ಲ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಈ ವಿಷಯದ ಬಗ್ಗೆ ಎಷ್ಟೋ ಸಾರಿ ನನ್ನ ಹತ್ತಿರ ಮಾತಾಡಿದ್ರಿ. ಅಮ್ಮಮ್ಮ ಜೊತೆ ನೆಮ್ಮದಿಯಿಂದ ಇರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅನು ಪ್ರಭಾಕರ್ ಅವರು ಟ್ವೀಟ್ ಮಾಡಿದ್ದಾರೆ.
ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಜೊತೆ ಅನು ಪ್ರಭಾಕರ್ ಮದುವೆ ಆಗಿದ್ದರು. ಅವರಿಬ್ಬರ ವಿವಾಹ 2002ರಲ್ಲಿ ನೆರವೇರಿತ್ತು. ಆದರೆ 2014ರಲ್ಲಿ ಕೃಷ್ಣ ಕುಮಾರ್ ಮತ್ತು ಅನು ಪ್ರಭಾಕರ್ ವಿಚ್ಛೇದನ ಪಡೆದುಕೊಂಡರು. ಬಳಿಕ 2016ರಲ್ಲಿ ನಟ ರಘು ಮುಖರ್ಜಿ ಜೊತೆಗೆ ಅನು ಪ್ರಭಾಕರ್ ಹೊಸದಾಗಿ ದಾಂಪತ್ಯ ಜೀವನ ಆರಂಭಿಸಿದರು. ಈ ದಂಪತಿಗೆ ನಂದನಾ ಎಂಬ ಮಗಳು ಇದ್ದಾಳೆ. ರಘು ಮುಖರ್ಜಿ ಕೂಡ ಜಯಂತಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ‘ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರ ಜೊತೆ ಅಭಿನಯಿಸುವ ಅದೃಷ್ಟ ನನಗೆ ಸಿಕ್ಕಿತ್ತು. ಅವರ ನಿಧನಕ್ಕೆ ತೀವ್ರ ಸಂತಾಪಗಳು. ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಘು ಮುಖರ್ಜಿ ಟ್ವೀಟ್ ಮಾಡಿದ್ದಾರೆ.
ನಿಮ್ಮ ಜೊತೆ ಕಳೆದಂತ ಪ್ರತಿ ಕ್ಷಣಾ ಸದಾ ನನ್ನ ಮನಸು ಹಾಗು ಹೃದಯದಲ್ಲಿ ಇರುತ್ತೆ Mom ❤️… ನಿಮ್ಮಿಂದ ಕಲೆತ ಜೀವನದ ಪಾಠಗಳು ನಾನು ಎಂದು ಮರೆಯೋಲ್ಲ ? ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಈ ವಿಷಯದಬಗ್ಗೆ ಎಷ್ಟೋ ಸರಿ ನನ್ನ ಹತ್ತಿರ ಮಾತಾಡಿದ್ರಿ ?..ಅಮ್ಮಮ್ಮ ಜೊತೆ ನೆಮ್ಮದಿಯಿಂದ ಇರಿ . ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ …. ?? pic.twitter.com/4JIxQn5bUF
— Anu Prabhakar Mukherjee (@AnuPrabhakar9) July 26, 2021
Greatest loss for Indian cinema… had the fortune of working with her . Deepest condolences. R.I.P #jayanthi mam .. pic.twitter.com/IZQBkTlnnL
— Raghu mukherjee (@RaghuMukherjee) July 26, 2021
‘ಅಮ್ಮ ಯಾವಾಗಲೂ ಜನರ ಜೊತೆ ಬೆರೆಯುತ್ತಿದ್ದರು. ಅದು ಅವರಿಗೆ ಹೆಚ್ಚು ಖುಷಿ ನೀಡುತ್ತಿತ್ತು. ಫ್ಯಾಮಿಲಿ ಎಂದರೆ ಅವರಿಗೆ ಕೇವಲ ರಕ್ತ ಸಂಬಂಧ ಮಾತ್ರ ಅಲ್ಲ. ಇಡೀ ಚಿತ್ರರಂಗವೇ ಅವರ ಕುಟುಂಬವಾಗಿತ್ತು. ಎಲ್ಲರ ಬಗ್ಗೆ ಪ್ರೀತಿ ಇತ್ತು. ಇತ್ತೀಚೆಗೆ ಪ್ರತಿದಿನ ಹಳೇ ಹಾಡುಗಳನ್ನು ಕೇಳುತ್ತಿದ್ದರು. ತಮ್ಮ ಚಿತ್ರರಂಗದ ಸ್ನೇಹಿತರ ಹಾಡುಗಳನ್ನು ನೋಡುತ್ತ ಕಾಲ ಕಳೆಯುತ್ತಿದ್ದರು. ಸರೋಜಾದೇವಿ, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಶ್ರುತಿ, ತಾರಾ, ಗಿರಿಜಾ ಲೋಕೇಶ್ ಮುಂತಾದವರು ತುಂಬ ಹತ್ತಿರದವರಾಗಿದ್ದರು. ಅವರ ಜೊತೆ ಆಗಾಗ ಫೋನ್ನಲ್ಲಿ ಮಾತನಾಡುತ್ತಿದ್ದರು’ ಎಂದು ತಾಯಿಯ ಕೊನೇ ದಿನಗಳ ಬಗ್ಗೆ ಕೃಷ್ಣ ಕುಮಾರ್ ಮಾತನಾಡಿದ್ದಾರೆ.
ಇದನ್ನೂ ಓದಿ:
ನಟ ಜಗ್ಗೇಶ್ ನೆನಪಿನ ಪುಟದಲ್ಲಿವೆ ‘ಅಭಿನಯ ಶಾರದೆ’ ಜಯಂತಿ ಜೊತೆ ಕಳೆದ ಸುಂದರ ಕ್ಷಣಗಳು
‘ಒನಕೆ ಓಬವ್ವ ಅಂದ್ರೆ ನೆನಪಾಗೋದೇ ಜಯಂತಿ’; ಅಭಿನಯ ಶಾರದೆಗೆ ಸ್ಯಾಂಡಲ್ವುಡ್ ಶ್ರದ್ಧಾಂಜಲಿ