
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ನಿರ್ಮಾಣದ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರದ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಅಷ್ಟಿಷ್ಟಲ್ಲ. ಇದರ ಟೈಟಲ್ ಟೀಸರ್ (Gandhada Gudi Title Teaser) ಇಂದು (ಡಿ.6) ಬಿಡುಗಡೆ ಆಗಿದೆ. ‘ಪಿಆರ್ಕೆ’ ಆಡಿಯೋ ಮೂಲಕ ರಿಲೀಸ್ ಆಗಿರುವ ಈ ಟೀಸರ್ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅದರ ಪರಿಣಾಮವಾಗಿ ಸೋಶಿಯಲ್ ಮೀಡಿಯಾದಲ್ಲಿ ‘ಗಂಧದ ಗುಡಿ’ ಹ್ಯಾಶ್ಟ್ಯಾಗ್ ಸಖತ್ ಟ್ರೆಂಡ್ ಆಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ಸೆಲೆಬ್ರಿಟಿಗಳು ಮತ್ತು ಅಪಾರ ಸಂಖ್ಯೆ ಅಭಿಮಾನಿಗಳು ಈ ಟೀಸರ್ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಟ್ವಿಟರ್ನಲ್ಲಿ ಪುಷ್ಪ (Pushpa Movie) ಮತ್ತು ಆರ್ಆರ್ಆರ್ (RRR Movie) ಸಿನಿಮಾಗಳನ್ನೂ ಮೀರಿಸಿ ‘ಗಂಧದ ಗುಡಿ’ ಟ್ರೆಂಡ್ ಆಗುತ್ತಿದೆ. ಟೀಸರ್ನಲ್ಲಿ ಇರುವ ದೃಶ್ಯ ವೈಭವ ಕಂಡ ಜನರು ಬೆರಗಾಗಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಈ ಕನಸಿನ ಪ್ರಾಜೆಕ್ಟ್ಗೆ ಅನೇಕ ಗಣ್ಯರು ಶುಭ ಕೋರಿದ್ದಾರೆ. ಆದಷ್ಟು ಬೇಗ ‘ಗಂಧದ ಗುಡಿ’ ರಿಲೀಸ್ ಆಗಲಿ ಎಂದು ಎಲ್ಲರೂ ಕಾಯುವಂತಾಗಿದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಲಿದೆ. ಸಂಜೆ 6 ಗಂಟೆಗೆ ಟ್ರೇಲರ್ ಬಿಡುಗಡೆ ಆಗುತ್ತಿರುವುದರಿಂದ ಟಾಲಿವುಡ್ ಸಿನಿಪ್ರಿಯರು ಆ ಬಗ್ಗೆ ಹೆಚ್ಚು ಹೆಚ್ಚು ಟ್ವೀಟ್ ಮಾಡುತ್ತಿದ್ದಾರೆ. ಹಾಗಾಗಿ ಅದು ಟ್ರೆಂಡಿಂಗ್ನಲ್ಲಿದೆ. ಅದನ್ನು ಮೀರಿಸಿ ‘ಗಂಧದ ಗುಡಿ’ ಸೌಂಡು ಮಾಡುತ್ತಿದೆ. ಅದೇ ರೀತಿ, ಬಹುನಿರೀಕ್ಷಿತ ‘ಆರ್ಆರ್ಆರ್’ ಸಿನಿಮಾ ಕೂಡ ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿದೆ. ಡಿ.9ರಂದು ಈ ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಈಗಲೇ ಕ್ರೇಜ್ ಹೆಚ್ಚಿಸಿದೆ. ಹಾಗಾಗಿ ‘ಆರ್ಆರ್ಆರ್’ ಕೂಡ ಟ್ವಿಟರ್ ಟ್ರೆಂಡ್ನಲ್ಲಿದೆ. ಅದನ್ನು ಹಿಂದಿಕ್ಕಿ ‘ಗಂಧದ ಗುಡಿ’ ಮಿಂಚುತ್ತಿದೆ.
ನಟ ಯಶ್, ಸಿಎಂ ಬಸವರಾಜ ಬೊಮ್ಮಾಯಿ, ‘ಕೆಜಿಎಫ್: ಚಾಪ್ಟರ್ 2’ ನಿರ್ದೇಶಕ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ, ಶರಣ್ ಸೇರಿದಂತೆ ಅನೇಕರು ‘ಗಂಧದ ಗುಡಿ’ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಹೆಚ್ಚು ಜನರನ್ನು ಈ ಟೀಸರ್ ತಲುಪುತ್ತಿದೆ.
‘ಗಂಧದ ಗುಡಿ’ ಡಾಕ್ಯುಮೆಂಟರಿ ಬಗ್ಗೆ ಪುನೀತ್ ರಾಜ್ಕುಮಾರ್ ಅವರು ಅನೇಕ ಸೆಲೆಬ್ರಿಟಿಗಳ ಜತೆ ಚರ್ಚೆ ಮಾಡಿದ್ದರು. ನಟ ಯಶ್ ಅದನ್ನೀಗ ನೆನಪು ಮಾಡಿಕೊಂಡಿದ್ದಾರೆ. ‘ನೀವು ಪ್ರತಿ ಬಾರಿ ಇದರ ಬಗ್ಗೆ ಮಾತನಾಡಿದಾಗಲೂ ನಿಮ್ಮ ಕಣ್ಣಲ್ಲಿ ಮೂಡುತ್ತಿದ್ದ ಹೊಳಪು ಈಗ ನೆನಪಾಗುತ್ತಿದೆ. ನಿಮಗೆ ಈ ಪ್ರಾಜೆಕ್ಟ್ ಎಷ್ಟು ಆಪ್ತವಾಗಿತ್ತು ಎಂಬುದಕ್ಕೆ ನಿಮ್ಮ ಉತ್ಸಾಹವೇ ಸಾಕ್ಷಿ ಆಗಿತ್ತು. ನಮ್ಮ ಗಂಧದ ಗುಡಿಯನ್ನು ನಿಮ್ಮ ನೋಟದ ಮೂಲಕ ನಮಗೆ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಅಪ್ಪು ಸರ್. ಇದು ನಿಜಕ್ಕೂ ಸ್ವರ್ಗ’ ಎಂದು ಯಶ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
‘ಗಂಧದ ಗುಡಿ’ ನೋಡಿ ಸೆಲೆಬ್ರಿಟಿಗಳು ಫಿದಾ; ಪುನೀತ್ ಕಾರ್ಯಕ್ಕೆ ಉಘೇ ಉಘೇ ಎಂದಿದ್ದು ಯಾರೆಲ್ಲ?