ನಟ ಪುನೀತ್ ರಾಜ್ಕುಮಾರ್ ಅವರಿಗೆ ತೀವ್ರ ಪ್ರಮಾಣದಲ್ಲಿ ಹಾರ್ಟ್ ಅಟ್ಯಾಕ್ ಆಗಿದೆ. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವಿಕ್ರಮ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಮೂಡಿಸಿದೆ.
‘ಇವತ್ತು ಬೆಳಗ್ಗೆ 11:30ಕ್ಕೆ ಚೆಸ್ಟ್ ಪೆನ್ ಆಗಿ ಇಲ್ಲಿ ಬಂದಿದ್ದಾರೆ. ಬರುವಾಗ ಸ್ವಲ್ಪ ಸೀರಿಯಸ್ ಆಗಿತ್ತು. ಗಂಭೀರ ಹೃದಯಾಘಾತವಾಗಿದೆ. ಇನ್ನೂ, ಆರೋಗ್ಯ ಗಂಭೀರವಾಗಿದೆ. ಏನನ್ನೂ ಹೇಳೋಕೆ ಆಗಲ್ಲ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ’ ಎಂದು ವೈದ್ಯರು ತಿಳಿಸಿದ್ದಾರೆ.
ಫಿಟ್ನೆಸ್ ಬಗ್ಗೆ ಪುನೀತ್ ಹೆಚ್ಚು ಗಮನ ನೀಡುತ್ತಾರೆ. ಪ್ರತಿದಿನ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಆರೋಗ್ಯದ ಬಗ್ಗೆ ಅವರಿಗೆ ಕಾಳಜಿ ಇದೆ. ಹಾಗಿದ್ದರೂ ಕೂಡ ಅವರಿಗೆ ಏಕಾಏಕಿ ಅನಾರೋಗ್ಯ ಉಂಟಾಗಿರುವುದು ಅಭಿಮಾನಿಗಳನ್ನು ಚಿಂತೆಗೆ ಈಡುಮಾಡಿದೆ. ಪುನೀತ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ಗಾಗಿ ನಿರೀಕ್ಷಿಸಲಾಗುತ್ತಿದೆ.
ಚಿಕ್ಕ ವಯಸ್ಸಿನಿಂದಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪುನೀತ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಮಕ್ಕಳಿಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಪುನೀತ್ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದ ಮೇಲೆ ಒಂದು ಕ್ಷಣ ಆತಂಕ ಮೂಡಿರುವುದು ನಿಜ. ಆದರೆ ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಸೋಶಿಯಲ್ ಮೀಡಿಯಾ ಮೂಲಕ ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ಪುನೀತ್ ಆರೋಗ್ಯದ ಸ್ಥಿತಿ ಗಂಭೀರ; ಅಳುತ್ತಲೇ ಆಸ್ಪತ್ರೆಗೆ ಬಂದ ಶಿವರಾಜ್ಕುಮಾರ್
Published On - 1:28 pm, Fri, 29 October 21