
ಪುನೀತ್ ರಾಜ್ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ‘ದ್ವಿತ್ವ’ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿ ಆಗಿದೆ. ಜು.1ರಂದು ಅನಾವರಣಗೊಂಡ ಈ ಸಿನಿಮಾದ ಶೀರ್ಷಿಕೆ ಬಗ್ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರ ಜೊತೆಗೆ ಈ ಚಿತ್ರದ ಪೋಸ್ಟರ್ ಅಸಲಿಯೋ ನಕಲಿಯೋ ಎಂಬ ಅನುಮಾನ ಕೂಡ ಕಾಡಲು ಶುರುವಾಗಿದೆ. ಗುರುವಾರ ಬಿಡುಗಡೆ ಆಗಿರುವ ಈ ಪೋಸ್ಟರ್ ತುಂಬಾ ಭಿನ್ನ ಮತ್ತು ಕ್ರಿಯೇಟಿವ್ ಆಗಿದೆ ಎಂಬುದೇನೋ ನಿಜ. ಅದನ್ನೇ ಹೋಲುವಂತಹ ಮತ್ತೊಂದು ಪೋಸ್ಟರ್ನಿಂದಾಗಿ ಅನುಮಾನ ಹೊಗೆಯಾಡುವಂತಾಗಿದೆ.
‘ದ್ವಿತ್ವ’ ಸಿನಿಮಾದಲ್ಲಿ ಸೈಕಲಾಜಿಕಲ್ ಕಥಾಹಂದರ ಇರಲಿದೆ. ಅದಕ್ಕೆ ತಕ್ಕಂತೆಯೇ ಪೋಸ್ಟರ್ ವಿನ್ಯಾಸಗೊಂಡಿದೆ. ಆದರೆ ದ್ವಿತ್ವ ಪೋಸ್ಟರ್ ಬಿಡುಗಡೆ ಆಗುವುದಕ್ಕಿಂತ 7 ತಿಂಗಳು ಮುನ್ನವೇ ಸೌಂಡ್ಕ್ಲೌಡ್ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿರುವ ಒಂದು ಪೋಸ್ಟರ್ ಕೂಡ ಅದನ್ನೇ ಹೋಲುವಂತಿದೆ. ಶೇ.95ರಷ್ಟು ಸಾಮ್ಯತೆ ಇರುವುದನ್ನು ಮೇಲ್ನೋಟಕ್ಕೆ ಕಾರಣಬಹುದು.
ಸದ್ಯ ಈ ಎರಡು ಪೋಸ್ಟರ್ಗಳನ್ನು ಎದುರುಬದುರು ಇಟ್ಟುಕೊಂಡು ಹೋಲಿಕೆ ಮಾಡಲಾಗುತ್ತಿದೆ. ಇವುಗಳಲ್ಲಿ ಅಸಲಿ ಯಾರದ್ದು, ನಕಲಿ ಯಾರದ್ದು? ಸೌಂಡ್ಕ್ಲೌಡ್ನಲ್ಲಿ ಇರುವ ಪೋಸ್ಟರ್ನಿಂದ ಸ್ಫೂರ್ತಿ ಪಡೆದು ‘ದ್ವಿತ್ವ’ ಪೋಸ್ಟರ್ ವಿನ್ಯಾಸ ಮಾಡಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಸ್ಪಷ್ಟನೆ ನೀಡಿದ ಬಳಿಕವೇ ಸತ್ಯಾಸತ್ಯತೆ ಏನು ಎಂಬುದು ಗೊತ್ತಾಗಬೇಕಿದೆ. ಅಂದಹಾಗೆ, ಈ ರೀತಿ ಪೋಸ್ಟರ್ ಕಾಪಿ ಆರೋಪ ಕೇಳಿಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ‘ಬಾಹುಬಲಿ’, ‘ರಾಬರ್ಟ್’ ಮುಂತಾದ ಸಿನಿಮಾಗಳ ಪೋಸ್ಟರ್ಗಳ ಮೇಲೂ ಇಂಥದ್ದೇ ಆರೋಪ ಎದುರಾಗಿತ್ತು.
‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ನಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಅವರು ದ್ವಿತ್ವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪುನೀತ್ ರಾಜ್ಕುಮಾರ್ ಮತ್ತು ಪವನ್ ಕುಮಾರ್ ಒಂದಾಗಿರುವುದು ವಿಶೇಷ. ಪ್ರೀತಾ ಜಯರಾಮನ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಇದನ್ನೂ ಓದಿ:
‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಕ್ಕಾಗಿ ಕೈ ಜೋಡಿಸಿದ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಸತ್ಯ ಪ್ರಕಾಶ್
ಪುನೀತ್ ರಾಜ್ಕುಮಾರ್ ಸಿನಿಮಾ ಹಾಡನ್ನು ಮಧುರವಾಗಿ ಹಾಡಿದ ಕೊರಿಯಾ ಯುವತಿ