ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಟಿಸುತ್ತಿರುವ ‘ರಾಣ’ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರತಂಡದಿಂದ ಈಗೊಂದು ಹೊಸ ನ್ಯೂಸ್ ಹೊರಬಿದ್ದಿದೆ. ‘ರಾಣ’ ಸಿನಿಮಾತಂಡಕ್ಕೆ ನಟಿ ರಾಗಿಣಿ ದ್ವಿವೇದಿ ಸೇರ್ಪಡೆ ಆಗಿದ್ದಾರೆ. ಹಾಗಂತ ಅವರು ಹೀರೋಯಿನ್ ಅಲ್ಲ. ಒಂದು ಸ್ಪೆಷಲ್ ಹಾಡಿನಲ್ಲಿ ‘ತುಪ್ಪದ ಬೆಡಗಿ’ ಹೆಜ್ಜೆ ಹಾಕಲಿದ್ದಾರೆ. ಆ ಮೂಲಕ ಅವರು ‘ರಾಣ’ ತಂಡದ ಭಾಗವಾಗಿದ್ದಾರೆ.
ಈ ವಿಶೇಷ ಹಾಡಿಗೆ ಸಾಹಿತ್ಯ ಬರೆದಿರುವುದು ಶಿವು ಬೇರಗಿ. ಈ ಹಿಂದೆ ‘ಚುಟು ಚುಟು ಅಂತೈತಿ..’, ‘ಯಕ್ಕಾ ನಿನ್ ಮಗಳು ನಂಗೆ ಚಿಕ್ಕೋಳಾಗಲ್ವಾ..’ ಮುಂತಾದ ಹಾಡುಗಳನ್ನು ಬರೆದು ಅವರು ಜನಮನ ಗೆದ್ದಿದ್ದಾರೆ. ಈಗ ಅವರು ‘ರಾಣ’ ಚಿತ್ರಕ್ಕಾಗಿ ಆಕರ್ಷಕ ಸಾಹಿತ್ಯ ಬರೆದಿದ್ದು, ಆ ಹಾಡಿಗೆ ಡ್ಯಾನ್ಸ್ ಮಾಡುವ ಅವಕಾಶ ರಾಗಿಣಿ ಪಾಲಿಗೆ ಒಲಿದು ಬಂದಿದೆ.
ರಾಗಿಣಿಗೆ ಸ್ಪೆಷಲ್ ಸಾಂಗ್ಗಳು ಹೊಸದೇನೂ ಅಲ್ಲ. ‘ವಿಕ್ಟರಿ’ ಚಿತ್ರದ ‘ಯಕ್ಕಾ ನಿನ್ ಮಗಳು ನಂಗೆ ಚಿಕ್ಕೋಳಾಗಲ್ವಾ..’ ಹಾಡಿನಲ್ಲಿ ಅವರು ನಟ ಶರಣ್ ಜೊತೆ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದರು. ಈಗ ‘ರಾಣ’ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂದು ತಿಳಿಯಲು ಅವರ ಫ್ಯಾನ್ಸ್ ಕಾದಿದ್ದಾರೆ. ಈ ಹಾಡಿಗೆ ಖ್ಯಾತ ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಅವರು ನೃತ್ಯ ನಿರ್ದೇಶನ ಮಾಡಲಿದ್ದಾರೆ. ಆ ಕಾರಣದಿಂದಲೂ ನಿರೀಕ್ಷೆ ಹೆಚ್ಚಿದೆ.
‘ರಾಣ’ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀರ್ದೇಶನದಲ್ಲಿ ಹಾಡುಗಳು ಮೂಡಿಬರುತ್ತಿವೆ. ಶ್ರೇಯಸ್ ಮಂಜುಗೆ ನಾಯಕಿಯರಾಗಿ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಕೆ. ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿಶ್ವ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಪ್ರಶಾಂತ್ ರಾಜಪ್ಪ ಸಂಭಾಷಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಫಸ್ಟ್ಲುಕ್ ಟೀಸರ್ ಬಿಡುಗಡೆ ಆಗಿತ್ತು. ಆ ಕಾರ್ಯಕ್ರಮಕ್ಕೆ ನಟ ಉಪೇಂದ್ರ ಮುಖ್ಯ ಅತಿಥಿಯಾಗಿ ಬಂದು ಶುಭ ಹಾರೈಸಿದ್ದರು.
ಇದನ್ನೂ ಓದಿ:
‘ಚರಂಡಿ ಕ್ಲೀನ್ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ