‘ಶಂಕರಾಭರಣ’ ಬಸ್ ಪ್ರಚಾರ: ಶೈನ್ ಶೆಟ್ಟಿ ಚಿತ್ರಕ್ಕೆ ರಾಜ್ ಬಿ. ಶೆಟ್ಟಿ ಬೆಂಬಲ
ಶೈನ್ ಶೆಟ್ಟಿ, ತನ್ವಿ ರಾಮ್, ಕೃತಿ ಮುಂತಾದವರು ನಟಿಸಿರುವ ‘ಶಂಕರಾಭರಣ’ ಸಿನಿಮಾದ ಪ್ರಚಾರವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಶೈನ್ ಶೆಟ್ಟಿ ಅವರು ಬಸ್ ಓಡಿಸುವ ಮೂಲಕ ಹಲವು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಚಿತ್ರತಂಡಕ್ಕೆ ರಾಜ್ ಬಿ. ಶೆಟ್ಟಿ ಅವರು ಸಹ ಬೆಂಬಲ ಸೂಚಿಸಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಅವರು ನಟಿಸಿರುವ ‘ಶಂಕರಾಭರಣ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಪೋಸ್ಟರ್ ಮತ್ತು ಹಾಡುಗಳ ಮೂಲಕ ಈ ಸಿನಿಮಾ ಈಗಾಗಲೇ ಗಮನ ಸೆಳೆಯುತ್ತಿದೆ. ಒಂದಷ್ಟು ಕಾರಣಗಳಿಂದಾಗಿ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಕಥೆ ವಿಭಿನ್ನವಾಗಿರುವುದು ಮಾತ್ರವಲ್ಲದೇ ಪ್ರಚಾರ ಕಾರ್ಯ ಕೂಡ ಡಿಫರೆಂಟ್ ಆಗಿಯೇ ಸಾಗುತ್ತಿದೆ. ಈ ಚಿತ್ರತಂಡಕ್ಕೆ ರಾಜ್ ಬಿ. ಶೆಟ್ಟಿ ಅವರು ಕೂಡ ಸಾಥ್ ನೀಡಿದ್ದಾರೆ.
ಸಿನಿಮಾ ಪ್ರಚಾರ ವಿಶೇಷವಾಗಿರಬೇಕು ಎಂಬ ಕಾರಣದಿಂದ ನಟ ಶೈನ್ ಶೆಟ್ಟಿ ಅವರು ಹೊಸ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸುಮಂತ್ ಭಟ್ ನಿರ್ದೇಶನದ ಈ ಸಿನಿಮಾದಲ್ಲಿ ಕಥಾನಾಯಕ ಬಸ್ ಡ್ರೈವರ್ ಆಗಿರುತ್ತಾನೆ. ಆದ್ದರಿಂದ ಸಿನಿಮಾದಲ್ಲಿ ಬಳಕೆ ಆಗಿರುವ ಬಸ್ ಓಡಿಸಿಕೊಂಡು ಶೈನ್ ಶೆಟ್ಟಿ ಅವರು ಕರ್ನಾಟಕದ ಹಲವು ಜಿಲ್ಲೆಗಳಿಗೆ ಭೇಟಿ ಕೊಡುತ್ತಿದ್ದಾರೆ.
ಕುಂದಾಪುರದಿಂದ ಆರಂಭವಾದ ಶೈನ್ ಶೆಟ್ಟಿ ಅವರ ‘ಶಂಕರಾಭರಣ’ ಸಿನಿಮಾದ ಬಸ್ ಜೊತೆಗಿನ ಪ್ರಚಾರ ಈಗಾಗಲೇ ಮಂಗಳೂರು, ಮೈಸೂರು, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರೇಕ್ಷಕರನ್ನು ಭೇಟಿ ಮಾಡಿ ಬಂದಾಗಿದೆ. ಜಿಲ್ಲೆಗೆ ಭೇಟಿ ಮಾಡುವುದರ ಜೊತೆಗೆ ಅಲ್ಲಿನ ಪ್ರಸಿದ್ದ ದೇವಾಲಯ, ಕಾಲೇಜುಗಳು ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಭೇಟಿ ಕೊಟ್ಟು ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ.
ಮಂಗಳೂರಿನ ಪ್ರಸಿದ್ಧ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ನಟ ಶೈನ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ರಾಜ್ ಬಿ. ಶೆಟ್ಟಿ ಅವರು ‘ಶಂಕರಾಭರಣ’ ಚಿತ್ರತಂಡವನ್ನು ಭೇಟಿ ಮಾಡಿದ್ದಾರೆ. ನವೆಂಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ತಪ್ಪದೇ ಸಿನಿಮಾವನ್ನು ನೋಡಿ ಎಂದು ಪ್ರೇಕ್ಷಕರಲ್ಲಿ ರಾಜ್ ಬಿ. ಶೆಟ್ಟಿ ಅವರು ಮನವಿ ಮಾಡಿದ್ದಾರೆ. ಆ ಮೂಲಕ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೆ ಹೊಸ ಸಿನಿಮಾ ನಿರ್ದೇಶನ ಆರಂಭಿಸಿದರೇ ರಾಜ್ ಬಿ ಶೆಟ್ಟಿ?
ಪ್ರಸ್ತುತ ಬೆಳಗಾವಿಯಲ್ಲಿ ಇರುವ ‘ಶಂಕರಾಭರಣ’ ಬಸ್ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಇನ್ನುಳಿದ ಭಾಗಗಳ ಪ್ರೇಕ್ಷಕರನ್ನು ಭೇಟಿ ಮಾಡಲು ಹೊರಡಲಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ತನ್ವಿ ರಾಮ್ ಅಭಿನಯಿಸಿದ್ದಾರೆ. ಮಲಯಾಳಂ ಚಿತ್ರರಂಗದ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ತನ್ವಿ ಅವರು ಈಗ ಶೈನ್ ಶೆಟ್ಟಿ ಜೊತೆ ‘ಶಂಕರಾಭರಣ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




