
ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದ (Sandalwood) ಹಿರಿಯ ಮತ್ತು ಯಶಸ್ವಿ ನಿರ್ದೇಶಕ. ಚಿತ್ರರಂಗಕ್ಕೆ ಹಲವು ಕಲ್ಟ್ ಸಿನಿಮಾಗಳನ್ನು ರಾಜೇಂದ್ರ ಸಿಂಗ್ ಬಾಬು ನೀಡಿದ್ದಾರೆ. ‘ಅಂತ’, ‘ನಾಗರಹೊಳೆ’, ‘ಬಂಧನ’, ‘ಮುತ್ತಿನ ಹಾರ’ ಹೀಗೆ ಅನೇಕ ಕಲ್ಟ್ ಸಿನಿಮಾಗಳನ್ನು ರಾಜೇಂದ್ರ ಸಿಂಗ್ ಬಾಬು ನೀಡಿದ್ದಾರೆ. ಇದೀಗ ಅವರು ತುಳು ನಾಡಿನ ಸಂಸ್ಕೃತಿಯಲ್ಲಿ ಬೆರೆತು ಹೋಗಿರುವ ಕ್ರೀಡೆ ಕಂಬಳ ಕುರಿತಾದ ಕತೆ ಹೊಂದಿರುವ ಹೊಸ ಸಿನಿಮಾ ನಿರ್ದೇಶಿಸಿದ್ದು, ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ. ವಿಶೇಷವೆಂದರೆ ಸುಮಾರು 11 ವರ್ಷಗಳ ಬಳಿಕ ರಾಜೇಂದ್ರ ಸಿಂಗ್ ಬಾಬು ಅವರ ಸಿನಿಮಾ ಒಂದು ಬಿಡುಗಡೆ ಆಗಲಿಕ್ಕೆ ತಯಾರಾಗಿದೆ.
ರಾಜೇಂದ್ರ ಸಿಂಗ್ ಬಾಬು ಅವರು ‘ವೀರ ಕಂಬಳ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದಾರೆ. ತುಳು ನಾಡಿನ ಸಂಸ್ಕೃತಿಯಾದ ಕಂಬಳದ ಬಗೆಗಿನ ಸಿನಿಮಾ ಆಗಿದ್ದು, ಈ ಕ್ರೀಡೆಗೆ ಸುಮಾರು ಎಂಟುನೂರು ವರ್ಷಗಳ ಇತಿಹಾಸವಿದೆ. ಈಗ ಈ ಕ್ರೀಡೆ ಸಾಕಷ್ಟು ಬದಲಾವಣೆಗೆ ಒಳಪಟ್ಟಿದೆ. ಆದರೆ ರಾಜೇಂದ್ರ ಸಿಂಗ್ ಬಾಬು ಅವರು ಈ ಕ್ರೀಡೆಯ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಕತೆ ಮಾಡಿದ್ದಾರೆ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ ‘ವೀರ ಕಂಬಳ’ ಸಿನಿಮಾವನ್ನು ನಿರ್ಮಿಸಲಾಗಿದೆ.
ಕಂಬಳವನ್ನು ಕೇಂದ್ರವಾಗಿಟ್ಟುಕೊಂಡು ಈ ಕಥೆ, ಚಿತ್ರಕಥೆ ಸಿದ್ಧಪಡಿಸಲು ರಾಜೇಂದ್ರ ಸಿಂಗ್ ಬಾಬು ಅವರು ಸುಮಾರು ಎರಡು ವರ್ಷಗಳ ಕಷ್ಟ ಪಟ್ಟಿದ್ದಾರೆ. ತುಳು ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ವಿಜಯ್ ಕೊಡಿಯಾಲ್ ಬೈಲ್ ಅವರು ಸಹ ಈ ಸಿನಿಮಾಕ್ಕೆ ಜೊತೆಯಾಗಿದ್ದು, ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರ ಆದಿತ್ಯ ಅವರು ನಾಯಕನಾಗಿ ನಟಿಸಿದ್ದಾರೆ. ತುಳುನಾಡಿನ ಪ್ರಾಜ್ಞರ ಮಾರ್ಗದರ್ಶನದಲ್ಲಿ ಯಾವುದೇ ತೊಡಕಿಲ್ಲದಂತೆ ವೀರ ಕಂಬಳವನ್ನು ಸಿನಿಮಾ ಮಾಡಿರುವುದಾಗಿ ರಾಜೇಂದ್ರ ಸಿಂಗ್ ಬಾಬು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:
ದಕ್ಷಿಣ ಕನ್ನಡದ ಮೂಡುಬಿದರೆಯ ಬಳಿಯಲ್ಲಿ ವಿಶಾಲವಾದ ಕಂಬಳದ ಗದ್ದೆಯನ್ನು ಸಿದ್ಧಪಡಿಸಿ, ಅಲ್ಲಿ ಕಂಬಳದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಪ್ರತೀ ದಿನ ಇಪ್ಪತ್ತು ಜೊತೆ ಕೋಣಗಳು ಹಾಗೂ ಐನೂರಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ವಿಶೇಷವೆಂದರೆ, ಕಂಬಳದಲ್ಲಿ ಕೋಣಗಳನ್ನು ಓಡಿಸೋದರಲ್ಲಿ ದಾಖಲೆ ಬರೆದಿರುವ ಶ್ರೀನಿವಾಸ್ ಗೌಡ ಇಲ್ಲಿಯೂ ಸಹ ಶ್ರೀನಿವಾಸ್ ಗೌಡರ ಪಾತ್ರದಲ್ಲೇ ನಟಿಸಿದ್ದಾರೆ. ಸ್ವರಾಜ್ ಶೆಟ್ಟಿ ಅವರಿಗೆ ಜೊತೆಯಾಗಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ದುಬೈನಲ್ಲಿಯೂ ಮಾಡಲಾಗಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳ ಅಂತಿಮ ಘಟ್ಟದಲ್ಲಿರುವ ಚಿತ್ರತಂಡ ಇಷ್ಟರಲ್ಲಿಯೇ ಬಿಡುಗಡೆಯ ನಿಖರ ದಿನಾಂಕ ಘೋಷಿಸಲಿದೆ.
ಈ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ.ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಸದರಿ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ವಿಜಯ್ ಕೊಡಿಯಾಲ್‌ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ