ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವೆ ಸಣ್ಣ-ಪುಟ್ಟ ಕಿರಿಕ್ಗಳು ಆಗುವುದು ಸಹಜ. ಎಲ್ಲ ಚಿತ್ರರಂಗದಲ್ಲೂ ಅದು ನಡೆದುಕೊಂಡು ಬಂದಿದೆ. ಕರುನಾಡಿನಲ್ಲಿ ಡಾ. ರಾಜ್ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅಭಿಮಾನಿಗಳ ನಡುವೆ ಕೆಲವೊಮ್ಮೆ ಘರ್ಷಣೆ ನಡೆದ ಉದಾಹರಣೆ ಕೂಡ ಇದೆ. ಆದರೆ ಅದನ್ನೆಲ್ಲ ಬದಿಗಿಟ್ಟು ಈಗ ಈ ಸ್ಟಾರ್ ನಟರ ಅಭಿಮಾನಿಗಳು ಒಂದಾಗಿದ್ದಾರೆ. ತಮ್ಮ ನೆಚ್ಚಿನ ಹೀರೋಗಳ ಪುತ್ಥಳಿಗಳನ್ನು ಉಳಿಸಿಕೊಳ್ಳಲು ಜೊತೆಯಾಗಿ ಕೈ ಜೋಡಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಂದು (ಸೆ.5) ಬೆಂಗಳೂರಿನ ರಾಜಾಜಿನಗರದ ‘ರಾಜ್ ಕುಮಾರ್ ಸಮುದಾಯ ಭವನ’ದಲ್ಲಿ 11 ಗಂಟೆಗೆ ಸುದ್ದಿಗೋಷ್ಠಿ ನಡೆಸುವುದಾಗಿ ರಾಜ್ ಮತ್ತು ವಿಷ್ಣು ಅಭಿಮಾನಿಗಳು ತಿಳಿಸಿದ್ದಾರೆ.
‘ಬೆಂಗಳೂರು ನಗರದಲ್ಲಿ ಇರುವ ಮೇರುನಟರ ಎಲ್ಲ ಪ್ರತಿಮೆಗಳನ್ನು ತೆರವುಗೊಳಿಸಲು ಬಿಬಿಎಂಪಿಯವರು ಕೋರ್ಟ್ ಆದೇಶದ ಮೇಲೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಮಗೂ ನ್ಯಾಯಾಲಯದ ಆದೇಶದ ಮೇಲೆ ಗೌರವವಿದೆ. ಆದರೆ ಪ್ರತಿಮೆ ಅಭಿಮಾನಿಗಳ ಹಕ್ಕು ಎಂಬುದನ್ನು ಸಾಬೀತುಪಡಿಸಲು ಕಾಲಾವಕಾಶ ಬಂದಿದೆ. ಬಹುಕಾಲದಿಂದ ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ಮಧ್ಯೆ ಸಂಘರ್ಷ ಏರ್ಪಟ್ಟಿರುತ್ತಿದ್ದವು. ಅದನ್ನೆಲ್ಲ ಮರೆತು ನಾವೆಲ್ಲರೂ ಒಂದೇ ವೇದಿಕೆಯಿಂದ ಒಗ್ಗಟ್ಟಾಗಿ ಬಿಬಿಎಂಪಿ ವಿರುದ್ಧ ಸಮರ ಸಾರಲು ಅಭಿಮಾನಗಳ ಸಮಾಗಮನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಇಬ್ಬರೂ ನಟರ ಅಭಿಮಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೆಚ್ಚಿನ ನಟರ ಅಭಿಮಾನಿಗಳು ಸಂಘಟನೆ ಕಟ್ಟಿಕೊಂಡು ಆಯಾ ಏರಿಯಾದಲ್ಲಿ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ. ಆದರೆ, ಇದರಲ್ಲಿ ಬಹುತೇಕರು ಬಿಬಿಎಂಪಿಯಿಂದ ಒಪ್ಪಿಗೆ ಪಡೆದಿಲ್ಲ. ಈ ಕಾರಣಕ್ಕೆ ಪುತ್ಥಳಿಯ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿದೆ. ರಾಜ್ಕುಮಾರ್, ಶಂಕರ್ ನಾಗ್, ವಿಷ್ಣು ವರ್ಧನ್, ಬಸವಣ್ಣ ಹೀಗೆ ಅನೇಕರ ಪುತ್ಥಳಿ ಸ್ಥಾಪನೆಗೊಂಡಿದೆ. ಇವರ ಅಭಿಮಾನಿಗಳು ಬಿಬಿಎಂಪಿಯಿಂದ ಅನುಮತಿ ಪಡೆದಿಲ್ಲ ಎಂಬುದು ಗೊತ್ತಾಗಿದೆ. ಆದಷ್ಟು ಬೇಗ ತೆರವು ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಈ ಬಗ್ಗೆ ಬಿಬಿಎಂಪಿ ಸರ್ವೆ ಕಾರ್ಯ ಶುರುಮಾಡಿದೆ. ಸರ್ವೆಯಲ್ಲಿ ಅನೇಕ ಪುತ್ಥಳಿಗಳನ್ನು ಗುರುತಿಸಲಾಗಿದೆ.
ಈ ಬಗ್ಗೆ ನಟ ಅನಿರುದ್ಧ್ ಇತ್ತೀಚೆಗೆ ಮಾತನಾಡಿದ್ದರು. ‘ಇಷ್ಟು ವರ್ಷ ಬಿಟ್ಟು ಈಗ ಪುತ್ತಳಿ ತೆರವು ಮಾಡುತ್ತಿರುವುದು ಕಷ್ಟಕರ ಸಂಗತಿ. ಅನಧಿಕೃತವಾಗಿ ಪುತ್ತಳಿ ನಿರ್ಮಾಣ ಮಾಡಿದ್ದು ತಪ್ಪಿರಬಹುದು. ಆದರೆ ನಿರ್ಮಾಣ ಸಮಯದಲ್ಲೇ ಈ ಬಗ್ಗೆ ಯೋಚಿಸಬೇಕಿತ್ತು. ಆ ಜವಾಬ್ದಾರಿ ಸರ್ಕಾರದ ಮೇಲಿತ್ತು. ಈಗಲೂ ನಗರದಲ್ಲಿರುವ ಪುತ್ತಳಿಗಳನ್ನು ತೆರವು ಮಾಡದೆ, ಸೂಕ್ತ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡಬಹುದು. ನನಗೆ ಸರ್ಕಾರದ ಮೇಲೆ ಭರವಸೆ ಇದೆ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ:
ಡಾ. ರಾಜ್, ಅಂಬರೀಷ್ಗೆ ಸಿಕ್ಕ ಸ್ಥಾನ ವಿಷ್ಣುವರ್ಧನ್ಗೆ ಯಾಕಿಲ್ಲ? ಸಾಕ್ಷಿ ಸಹಿತ ಪ್ರಶ್ನೆ ಕೇಳಿದ ಅನಿರುದ್ಧ್
‘ಡಾ. ರಾಜ್ಕುಮಾರ್ ನೋಡಿ ಮೆಚ್ಚಿದ್ದ ಧಾರಾವಾಹಿ ಅದು’; ಅಪರೂಪದ ಕ್ಷಣ ನೆನಪಿಸಿಕೊಂಡ ಶ್ರೀದೇವಿ