ಕಾಂಗ್ರೆಸ್ ನಾಯಕ ಮಿಥುನ್ ರೈ (Mithun Rai) ಅವರು ಉಡುಪಿ ಮಠದ ಜಾಗದ ವಿಚಾರದಲ್ಲಿ ನೀಡಿದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಈ ಹೇಳಿಕೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ (Rakshit Shetty) ಅವರು ಈ ವಿಚಾರದಲ್ಲಿ ಟ್ವೀಟ್ ಮಾಡಿದ್ದು, ಕಿಡಿಕಾರಿದ್ದಾರೆ. ‘ಗೊತ್ತಿಲ್ಲದ ವಿಚಾರದಲ್ಲಿ ಅಸಂಬದ್ಧ ಹೇಳಿಕೆ ಏಕೆ’ ಎಂದು ಮಿಥುನ್ ರೈ ಹೆಸರು ಉಲ್ಲೇಖಿಸದೇ ಪ್ರಶ್ನೆ ಮಾಡಿದ್ದಾರೆ. ರಕ್ಷಿತ್ ಅವರ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ.
ಮೂಡಬಿದ್ರೆ ತಾಲೂಕಿನ ಪುತ್ತಿಗೆಯಲ್ಲಿ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮ ನಡೆದಿದೆ. ಇದಕ್ಕೆ ಮಿಥುನ್ ರೈ ಆಗಮಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ‘ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು’ ಎಂದು ಹೇಳಿದ್ದಾರೆ. ಇದರಿಂದ ವಿವಾದ ಹುಟ್ಟಿಕೊಂಡಿದೆ.
‘ದೇವಾಲಯದ ಪಟ್ಟಣ ಉಡುಪಿಗೆ ಸಾವಿರ ವರ್ಷಗಳ ಇತಿಹಾಸ ಇದೆ. ನಿಮಗೆ ತಿಳಿದಿಲ್ಲದ ವಿಚಾರದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಅಸಂಬದ್ಧವಾಗಿ ಮಾತನಾಡುವುದು ಏಕೆ?’ ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ವ್ಯಕ್ತಿಯೋರ್ವ, ‘ರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ. ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟೇ ಸಾಕು’ ಎಂದು ಬರೆದುಕೊಂಡಿದ್ದ. ಇದಕ್ಕೆ ರಕ್ಷಿತ್ ಉತ್ತರ ಕೊಟ್ಟಿದ್ದಾರೆ.
The temple town of Udupi has written history of more than thousand years… Why talk nonsense on a public platform when you have no idea???
— Rakshit Shetty (@rakshitshetty) March 11, 2023
‘ಉಡುಪಿ ನನ್ನ ಜನ್ಮಸ್ಥಳ. ಬಕೆಟ್ ಅಲ್ಲಾ, ಟ್ಯಾಂಕರ್ ಹಿಡಿತೀನಿ. ಅಂದಹಾಗೆ ಅವರು (ಮಿಥುನ್ ರೈ) ಯಾವ ಭೂಮಿಯ ಬಗ್ಗೆ ಮಾತನಾಡಿದ್ದಾರೆಂಬುದು ಖಚಿತ ಆಗಿಲ್ಲ. ಆದರೆ ಕಾರ್ ಸ್ಟ್ರೀಟ್‌ನಲ್ಲಿರುವ ಜಮೀನು ಖಂಡಿತವಾಗಿಯೂ ಅಲ್ಲ. ಕೃಷ್ಣಮಠಕ್ಕಿಂತ ಅನಂತೇಶ್ವರ ದೇವಸ್ಥಾನ ಹಳೆಯದು. ಇವೆಲ್ಲಕ್ಕಿಂತ ಚಂದ್ರಮೌಳೀಶ್ವರ ದೇವಸ್ಥಾನ ಇನ್ನೂ ಹಳೆಯದು’ ಎಂದು ರಕ್ಷಿತ್ ಇತಿಹಾಸ ತಿಳಿಸಿದ್ದಾರೆ.
1. Udupi is my birth place… Bucket alla, tanker hiditini… 2. With all due respect, not sure which land he is talking about but definitely not the land in car street… 3. The Ananteshwara temple is even older than Krishna Matt and the Chandramaulishwar temple is even older…
— Rakshit Shetty (@rakshitshetty) March 11, 2023
‘ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಎಂದಿಗೂ ಮಾತನಾಡುವುದಿಲ್ಲ. ಇದು ನನ್ನ ಆಸಕ್ತಿಯ ಕ್ಷೇತ್ರ. ಹೀಗಾಗಿ ನಾನು ಏನು ಮಾತನಾಡುತ್ತಿದ್ದೇನೆಂದು ನನಗೆ ಗೊತ್ತಿದೆ’ ಎಂದಿದ್ದಾರೆ ರಕ್ಷಿತ್.
ರಕ್ಷಿತ್ ಶೆಟ್ಟಿ ಅವರ ಊರು ಉಡುಪಿ. ಅವರು ಹುಟ್ಟಿ ಬೆಳೆದಿದ್ದು ಇಲ್ಲಿಯೇ. ಈ ಕಾರಣಕ್ಕೆ ಅವರಿಗೆ ಊರಿನ ಬಗ್ಗೆ ವಿಶೇಷ ಪ್ರೀತಿ ಇದೆ. ಅವರ ನಿರ್ದೇಶನದ ಮೊದಲ ಸಿನಿಮಾ ‘ಉಳಿದವರು ಕಂಡಂತೆ’ ಉಡುಪಿಯಲ್ಲೇ ಶೂಟ್ ಮಾಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Sat, 11 March 23