ನಟ ರಕ್ಷಿತ್ ಶೆಟ್ಟಿ ಅವರು ನಿರ್ಮಾಪಕನಾಗಿಯೂ ಸಕ್ರಿಯರಾಗಿದ್ದಾರೆ. ಅವರು ನಿರ್ಮಾಣ ಮಾಡುವ ಸಿನಿಮಾಗಳಿಗೆ ಈ ಮೊದಲು ಕೂಡ ವಿಘ್ನಗಳು ಉಂಟಾಗಿದ್ದವು. ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಾ ಸ್ಟುಡಿಯೋಸ್’ ನಿರ್ಮಾಣ ಮಾಡಿದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಎರಡು ಹಾಡನ್ನು ಅನುಮತಿ ಇಲ್ಲದೇ ಬಳಸಲಾಗಿದೆ ಎಂಬ ಕಾರಣಕ್ಕೆ ಈಗ ‘ಎಂಆರ್ಟಿ ಮ್ಯೂಸಿಕ್’ ಸಂಸ್ಥೆಯು ಕೇಸ್ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ‘ಪರಂವಾ ಸ್ಟುಡಿಯೋಸ್’ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ಅಲ್ಲದೇ, ಈ ವ್ಯಾಜ್ಯವನ್ನು ನ್ಯಾಯಾಲಯದಲ್ಲೇ ಇತ್ಯರ್ಥ ಮಾಡಿಕೊಳ್ಳಲು ರಕ್ಷಿತ್ ಶೆಟ್ಟಿ ನಿರ್ಧರಿಸಿದ್ದಾರೆ.
‘ಪರಂವಾ ಸ್ಟುಡಿಯೋಸ್’ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ವಿವರವಾಗಿ ಸ್ಪಷ್ಟನೆ ಪ್ರಕಟಿಸಲಾಗಿದೆ. ಆ ಪತ್ರ ಹೀಗಿದೆ.. ‘ಪ್ರೀತಿಯ ಪ್ರೇಕ್ಷಕರೇ ಹಾಗೂ ಮಾಧ್ಯಮ ಮಿತ್ರರೇ, ನಾವು ಈ ಬಹಿರಂಗ ಪತ್ರವನ್ನು ಎಂಆರ್ಟಿ ಮ್ಯೂಸಿಕ್ ಸಂಸ್ಥೆ ನಮ್ಮ ಮೇಲೆ 2 ಹಾಡಿನ ಹಕ್ಕು ಉಲ್ಲಂಘನೆಯ ಆರೋಪ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ಬರೆದಿರುತ್ತೇವೆ. ಮೊದಲಿಗೆ ಸ್ಪಷ್ಟಿಕರಿಸಲು, ಚಿತ್ರದಲ್ಲಿ ಬಳಕೆಯಾಗಿರುವ ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಕಾರಣ, ಚಿತ್ರದಲ್ಲಿ ಈ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂದು, ಹಾಗು ಬಳಕೆಯ ರೂಪವನ್ನು ನಿಮ್ಮ ಗಮನಕ್ಕೆ ತರಲು’ ಎಂದು ಪತ್ರ ಆರಂಭಿಸಲಾಗಿದೆ.
Sincerely, Paramvah Studios🤗#ParamvahStudios pic.twitter.com/kPUoFqAfss
— Paramvah Studios (@ParamvahStudios) July 15, 2024
‘ಬಳಕೆಯ ವಿವರ: 1. ತರಗತಿಯೊಂದಲ್ಲಿ ಶಾಲಾಬಾಲಕಿ ‘ಒಮ್ಮೆ ನಿನ್ನನ್ನು..’ ಹಾಡನ್ನು ಸಹಪಾಠಿಗಳ ಮುಂದೆ ಹಾಡುವುದು. 2. ಮನೆಯ ಟಿವಿಯಲ್ಲಿ ‘ನ್ಯಾಯ ಎಲ್ಲಿದೆ..’ ಹಾಡಿನ ಪ್ರಸಾರಣೆ. ಈ ಮುಂಚೆ, ಅಂದರೆ, ಬ್ಯಾಚುಲರ್ ಪಾರ್ಟಿ ಸಿನಿಮಾ ತೆರೆಕಾಣುವುದಕ್ಕೂ ಮುನ್ನವೇ ನಾವು ‘ಎಂಆರ್ಟಿ’ ಸಂಸ್ಥೆಯ ಮುಖ್ಯಸ್ಥರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದೆವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಜೆಟ್ಅನ್ನು ಮೀರಿತ್ತು. ಎಂಆರ್ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರುಮಾತುಕತೆಗೆ ತಯಾರಿರರಿಲ್ಲ. ಈಗ, ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಬಂದಿದ್ದು, ಎಫ್ಐಆರ್ ದಾಖಲಾಗಿದೆ’ ಎಂದು ಬರೆಯಲಾಗಿದೆ.
‘ಇದು ನಿಜವಾಗಿಯು ಹಾಡಿನ ಹಕ್ಕು ಉಲ್ಲಂಘನೆಯೆ? ಹೌದಾಗಿದ್ದೇ ಆದಲ್ಲಿ, ನಾವು ತೆರಬೇಕಾದ ದಂಡವಾದರೂ ಎಷ್ಟು? ಏಕೆಂದರೆ ಎಂಆರ್ಟಿ ಸಂಸ್ಥೆಯಿಂದ ಕೇಳಲ್ಪಟ್ಟದ್ದು ಬೃಹತ್ ಮೊತ್ತ ಎಂದರೆ ತಪ್ಪಾಗಲಾರದು. ಅಲ್ಲವಾದರೆ, ಈ ತರಹದ ಆರೋಪವನ್ನು ಈಗಾಗಲಿ ಅಥವಾ ಮುಂಬರುವ ದಿನಗಳಲ್ಲಾಗಲಿ ಹೇಗೆ ಸಹಿಸಿಕೊಳ್ಳುವುದು? ಇದೊಂದು ಯಕ್ಷ ಪ್ರಶ್ನೆ. ಇದಕ್ಕೆ ಉತ್ತರ ನಾವು ಹುಡುಕಬಯಸುತ್ತೇವೆ’ ಎಂದಿದೆ ‘ಪರಂವಾ ಸ್ಟುಡಿಯೋಸ್’.
ಇದನ್ನೂ ಓದಿ: ಆರು ಮರಿಗಳಿಗೆ ಜನ್ಮ ನೀಡಿದ 777 ಚಾರ್ಲಿ; ಲೈವ್ ಬಂದು ಸಿಹಿ ಸುದ್ದಿ ನೀಡಿದ ರಕ್ಷಿತ್ ಶೆಟ್ಟಿ
‘ಹಾಗಾಗಿ, ನ್ಯಾಯ ಮತ್ತು ಪ್ರಭುದ್ಧತೆಯನ್ನು ಕಾಪಾಡಿಕೊಳ್ಳಲು ನಾವು ಇದನ್ನು ನ್ಯಾಯಸ್ಥಾನದಲ್ಲಿಯೇ ನಿರ್ಧಾರವಾಗಲಿ ಎಂದು ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ.ಇದರಿಂದ ಇನ್ನು ಮುಂಬರುವ ದಿನಗಳಲ್ಲಿ, ನಮಗಷ್ಟೇ ಅಲ್ಲ, ಬೇರೆ ಇನ್ಯಾವ ಸಿನಿಮಾಕರ್ಮಿಗೂ ಈ ಪರಿಸ್ಥಿತಿ ಹಾಗೂ ಗೊಂದಲ ಎದುರಾಗಬಾರದೆಂದು ನಮ್ಮ ಈ ಪ್ರಾಮಾಣಿಕ ಪ್ರಯತ್ನ. ನಿಮ್ಮ ಬೆಂಬಲ ಮತ್ತು ಪ್ರೀತಿಯನ್ನು ಆಶಿಸುವ, ಪರಂವಾ ಸ್ಟಡಿಯೋಸ್’ ಎಂದು ಬಹಿರಂಗ ಪತ್ರ ಹಂಚಿಕೊಳ್ಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:37 pm, Mon, 15 July 24