ಸಚಿವ ರಾಮಲಿಂಗ ರೆಡ್ಡಿ ಬಿಡುಗಡೆ ಮಾಡಿದ ‘ಹೈಡ್ ಆ್ಯಂಡ್​ ಸೀಕ್’ ಸಿನಿಮಾ ಟ್ರೇಲರ್‌

ಟ್ರೇಲರ್​ ಮೂಲಕ ಗಮನ ಸೆಳೆಯುತ್ತಿರುವ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಮಾರ್ಚ್ 15ರಂದು ಬಿಡುಗಡೆ ಆಗಲಿದೆ. ಅನೂಪ್​ ರೇವಣ್ಣ ಮತ್ತು ಧನ್ಯಾ ರಾಮ್​ಕುಮಾರ್​ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯಲು ಚಿತ್ರತಂಡದವರು ಕಾದಿದ್ದಾರೆ. ಗಣ್ಯರ ಸಮ್ಮುಖದಲ್ಲಿ ಟ್ರೇಲರ್​ ರಿಲೀಸ್​ ಮಾಡಲಾಗಿದೆ.

ಸಚಿವ ರಾಮಲಿಂಗ ರೆಡ್ಡಿ ಬಿಡುಗಡೆ ಮಾಡಿದ ‘ಹೈಡ್ ಆ್ಯಂಡ್​ ಸೀಕ್’ ಸಿನಿಮಾ ಟ್ರೇಲರ್‌
ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​, ಎಚ್​.ಎಂ.ರೇವಣ್ಣ, ರಾಮಲಿಂಗಾರೆಡ್ಡಿ

Updated on: Feb 28, 2024 | 12:24 PM

ಕನ್ನಡದ ‘ಹೈಡ್​ ಆ್ಯಂಡ್​ ಸೀಕ್​’ (Hide and Seek) ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಅವರು ಈ ಟ್ರೇಲರ್​ ರಿಲೀಸ್​ ಮಾಡಿ ಶುಭ ಹಾರೈಸಿದ್ದಾರೆ. ಈ ಸಿನಿಮಾದಲ್ಲಿ ಡಾ. ರಾಜ್​ಕುಮಾರ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಮತ್ತು ಮಾಜಿ ಸಚಿವ ಎಚ್​.ಎಂ. ರೇವಣ್ಣ ಅವರ ಪುತ್ರ ಅನೂಪ್​ ರೇವಣ್ಣ (Anoop Revanna) ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅನೂಪ್ ರೇವಣ್ಣ ನಟನೆಯ 4ನೇ ಚಿತ್ರ ಇದು. ಮಾರ್ಚ್ 15ರಂದು ರಾಜ್ಯಾದ್ಯಂತ ‘ಹೈಡ್​ ಆ್ಯಂಡ್​ ಸೀಕ್​’ ತೆರೆಕಾಣಲಿದೆ. ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಹಾಜರಿದ್ದರು. ಎಲ್ಲರೂ ಈ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

‘ಸುನೇರಿ ಆರ್ಟ್ ಕ್ರಿಯೇಶನ್ಸ್’ ಮೂಲಕ ಪುನೀತ್ ನಾಗರಾಜು ಮತ್ತು ವಸಂತ್‌ ರಾವ್ ಎಂ. ಕುಲಕರ್ಣಿ ಅವರು ಜೊತೆಯಾಗಿ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪುನೀತ್ ನಾಗರಾಜು ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ರಾಮಲಿಂಗಾರೆಡ್ಡಿ, ಎಸ್. ವಿಶ್ವನಾಥ್ ಹಾಗೂ ರೇವಣ್ಣ ಅವರ ಅನೇಕ ಸ್ನೇಹಿತರು ಬಂದು ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

‘ರೇವಣ್ಣ ಅವರ ಪುತ್ರ ಹೀರೋ ಆಗಿ ಅಭಿನಯಿಸಿರುವ ಈ ಸಿನಿಮಾ ಯಶಸ್ವಿ ಆಗಲಿ. ಇದು ಅವರ 4ನೇ ಸಿನಿಮಾ. ಟ್ರೇಲರ್​ನಲ್ಲಿ ಅವರ ನಟನೆ ಚೆನ್ನಾಗಿದೆ. ಸಿನಿಮಾ ಕೂಡ ಚೆನ್ನಾಗಿರುತ್ತದೆ ಎಂಬ ಭರವಸೆ ಇದೆ. ಈ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆಯ ಹೆಸರು ಸಿಗಲಿದೆ’ ಎಂದು ರಾಮಲಿಂಗ ರೆಡ್ಡಿ ಅವರು ವಿಶ್​ ಮಾಡಿದರು. ಪ್ರೊಫೆಸರ್ ಡಿ.ಕೆ. ರವಿ ಮಾತನಾಡಿ, ‘ಈ ಟ್ರೇಲರ್​ ತುಂಬ ಚೆನ್ನಾಗಿದೆ. ಅನೂಪ್ ಒಳ್ಳೆಯ ಹುಡುಗ. ಆತನಿಗೆ ಉತ್ತಮ ಭವಿಷ್ಯ ಇದೆ’ ಎಂದು ಹೇಳಿದರು.

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಟ್ರೇಲರ್​:

Hide & Seek Official Trailer | Anoop Revanna | Dhanya Ramkumar | Punith Nagaraj | Sandy Addanki

ಟ್ರೇಲರ್​ ಬಿಡುಗಡೆ ಬಳಿಕ ರೇವಣ್ಣ ಮಾತನಾಡಿದರು. ‘ಇಂದು ಚಿತ್ರರಂಗ ತುಂಬ ಚಾಲೆಂಜಿಂಗ್ ಕ್ಷೇತ್ರವಾಗಿದೆ. ಕನ್ನಡ ಚಿತ್ರರಂಗಕ್ಕೆ ಈ ಮೊದಲು ಸೀಮಿತ ಮಾರುಕಟ್ಟೆಯಿತ್ತು. ಆದರೆ ಈಗ ಅದು ವಿಸ್ತಾರ ಆಗಿದೆ. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ನಾನು ಅಲ್ಲಿಗೆ ಹೋಗಿದ್ದೆ. ಎಲ್ಲರೂ ಫ್ಯಾಮಿಲಿ ರೀತಿ ಸಿನಿಮಾ ಮಾಡಿದ್ದಾರೆ’ ಎಂದು ರೇವಣ್ಣ ಹೇಳಿದರು. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರಕ್ಕೆ ಪಿಜೋ ಪಿ. ಜಾನ್​ ಛಾಯಾಗ್ರಹಣ ಮಾಡಿದ್ದಾರೆ. ಮಧು ತುಂಬೆಕೆರೆ ಅವರು ಸಂಕಲನ ಈ ಸಿನಿಮಾಗಿದೆ. ಸ್ಯಾಂಡಿ ಅಡ್ಡಂಕಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಅನೂಪ್​ ರೇವಣ್ಣ ಜತೆ ಧನ್ಯಾ ರಾಮ್​ಕುಮಾರ್​ ‘ಹೈಡ್​ ಆ್ಯಂಡ್​ ಸೀಕ್​’; ಇಲ್ಲಿದೆ ಮೋಷನ್​ ಪೋಸ್ಟರ್​

ಅನೂಪ್ ರೇವಣ್ಣ ಅವರು ಈ ಸಿನಿಮಾದಲ್ಲಿ ಒಬ್ಬ ಕಿಡ್ನಾಪರ್ ಪಾತ್ರ ಮಾಡಿದ್ದಾರೆ. ನಾಯಕಿ ಧನ್ಯಾ ರಾಮ್‌ಕುಮಾರ್ ಅವರು ಉದ್ಯಮಿಯ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಅವರ ಸಹೋದರ ಧೀರೇನ್ ರಾಮ್​ಕುಮಾರ್ ಅವರು ತಂಗಿಯ ಸಿನಿಮಾಗೆ ಶುಭ ಕೋರಿದ್ದಾರೆ. ಅಪಹರಣ ಕೂಡ ಒಂದು ಸಂಘಟನೆಯ ರೀತಿ ನಡೆಯುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ನಿರ್ದೇಶಕ ಪುನೀತ್ ನಾಗರಾಜು ಹೇಳಿದ್ದಾರೆ. ಮಾಗಡಿ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ 30 ದಿನಗಳ ಶೂಟಿಂಗ್​ ಮಾಡಲಾಗಿದೆ. ಈ ಸಿನಿಮಾದಲ್ಲಿ ಕಥಾನಾಯಕನೇ ಕಿಡ್ನಾಪರ್! ಹೆಚ್ಚು ಮಾತನಾಡದ, ಯಾವುದನ್ನೂ ನೇರವಾಗಿ ಅಭಿವ್ಯಕ್ತಿಸದ ಹುಡುಗನಾಗಿ ಅನೂಪ್ ರೇವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಮಾರ್ಚ್ 15ರಂದು ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾ ಬಿಡುಗಡೆ ಆಗಲಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯಲು ಚಿತ್ರತಂಡ ಕಾದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us