
‘ಸ್ಯಾಂಡಲ್ವುಡ್ ಕ್ವೀನ್’ ರಮ್ಯಾ (Sandalwood Queen Ramya) ಅವರು ನಟನೆಯಿಂದ ದೂರ ಉಳಿದುಕೊಂಡಿರಬಹುದು. ಆದರೆ ಅವರ ಹವಾ ಕಮ್ಮಿ ಆಗಿಲ್ಲ. ಚಿತ್ರರಂಗದ ಅನೇಕರ ಜೊತೆ ಅವರು ಸಂಪರ್ಕದಲ್ಲಿದ್ದಾರೆ. ಅವರು ಬಣ್ಣ ಹಚ್ಚದೇ ಬರೋಬ್ಬರಿ 8 ವರ್ಷ ಕಳೆದಿದೆ. ಆದಷ್ಟು ಬೇಗ ರಮ್ಯಾ (Ramya Divya Spandana) ಕಮ್ಬ್ಯಾಕ್ ಮಾಡಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಅವರು ಯಾವುದೇ ಸಿನಿಮಾದಲ್ಲೂ ನಟಿಸದೇ ಇದ್ದರೂ ಸಹ ಕನ್ನಡದ ಟಾಪ್ 5 ಜನಪ್ರಿಯ ನಟಿಯರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಹೌದು, Ormax Media ನಡೆಸಿದ ಸಮೀಕ್ಷೆಯಲ್ಲಿ ರಮ್ಯಾ ಅವರು 4ನೇ ಸ್ಥಾನ ಪಡೆದಿದ್ದಾರೆ. ಇನ್ನುಳಿದ ಸ್ಥಾನಗಳಲ್ಲಿ ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ, ಆಶಿಕಾ ರಂಗನಾಥ್, ರಚಿತಾ ರಾಮ್ ಇದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ನಂ.1 ಸ್ಥಾನ ಸಿಕ್ಕಿದೆ.
ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಅವರು Ormax Media ಸಂಸ್ಥೆಯ ಸಮೀಕ್ಷೆ ವರದಿಯನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘8 ವರ್ಷದಿಂದ ನಾನು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಕೂಡ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ರಚಿತಾ ರಾಮ್, ಆಶಿಕಾ ರಂಗನಾಥ್, ರಶ್ಮಿಕಾ ಮಂದಣ್ಣ, ರಾಧಿಕಾ ಪಂಡಿತ್ ಜೊತೆ ಈ ಪಟ್ಟಿಯಲ್ಲಿ ನಾನು ಕೂಡ ಸ್ಥಾನ ಪಡೆದಿರುವುದಕ್ಕೆ ಖುಷಿ ಆಗುತ್ತಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ರಮ್ಯಾ ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಪುನೀತ್ ರಾಜ್ಕುಮಾರ್, ಸುದೀಪ್, ಯಶ್, ಗಣೇಶ್, ಉಪೇಂದ್ರ, ನೆನಪಿರಲಿ ಪ್ರೇಮ್, ವಿಜಯ್ ರಾಘವೇಂದ್ರ ಮುಂತಾದ ಸ್ಟಾರ್ ನಟರ ಜೊತೆ ರಮ್ಯಾ ತೆರೆ ಹಂಚಿಕೊಂಡರು. 2014ರಿಂದ ಈಚೆಗೆ ರಮ್ಯಾ ಅವರು ನಟನೆ ಕಡೆಗೆ ಆಸಕ್ತಿ ತೋರಿಸಿಲ್ಲ. ಅವರು ನಟಿಸಿದ್ದ ‘ನಾಗರಹಾವು’ ಸಿನಿಮಾ 2016ರಲ್ಲಿ ತೆರೆಕಂಡಿತು.
ಒಂದೊಳ್ಳೆಯ ಸಿನಿಮಾ ಮೂಲಕ ರಮ್ಯಾ ಅವರು ಮತ್ತೆ ನಟನೆಗೆ ಮರಳಬೇಕು ಎಂದು ಫ್ಯಾನ್ಸ್ ಬೇಡಿಕೆ ಇಡುತ್ತಿದ್ದಾರೆ. ‘ಎಷ್ಟೇ ವರ್ಷ ಕಳೆದರೂ ನೀವೇ ನಮ್ಮ ನೆಚ್ಚಿನ ನಟಿ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅನೇಕ ಸಿನಿಮಾ ತಂಡಗಳಿಗೆ ರಮ್ಯಾ ಅವರು ಶುಭ ಹಾರೈಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಚಿತ್ರದ ಶೂಟಿಂಗ್ ಸೆಟ್ಗೆ ಅವರು ಭೇಟಿ ನೀಡಿ ಗಮನ ಸೆಳೆದಿದ್ದರು.
Published On - 7:32 am, Tue, 26 July 22