
ನಟಿ ರಮ್ಯಾಗೆ (Ramya) ಅಶ್ಲೀಲ ಸಂದೇಶ ಕಳಿಸಿರುವ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು 600 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇನ್ನೂ ಹಲವರು ಪರಾರಿ ಆಗಿದ್ದರು. ಇದೀಗ ಆರೋಪಿಗಳ ವಿರುದ್ಧ ಪೊಲೀಸರು ಬರೋಬ್ಬರಿ 600 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ರಮ್ಯಾ ವಿರುದ್ಧ ಅತ್ಯಂತ ಅವಾಚ್ಯ, ಅಶ್ಲೀಲ ಶಬ್ದಗಳನ್ನು ಆರೋಪಿಗಳು ಬಳಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ನಾಲ್ಕನೇ ಎಸಿಜಿಎಂ ನ್ಯಾಯಾಲಯಕ್ಕೆ ಆರೋಪ ಪ್ಟಟಿಯನ್ನು ಸಲ್ಲಿಕೆ ಮಾಡಿದ್ದಾರೆ. ರಾಜೇಶ್, ಓಬಣ್ಣ, ಗಂಗಾಧರ್, ಭುವನ್ಗೌಡ ಸೇರಿದಂತೆ 11 ಜನರ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ ಆಗಿದೆ. ಹಲವು ನಕಲಿ ಖಾತೆಗಳಿಂದ ರಮ್ಯಾಗೆ ಕೀಳು ಸಂದೇಶಗಳನ್ನು ಕಳಿಸಲಾಗಿತ್ತು. ವೈಯಕ್ತಿಕ ನಿಂದನೆಯನ್ನು ಮಾಡಲಾಗಿತ್ತು. ದರ್ಶನ್ ಪರ ವಹಿಸಿ ಈ ಖಾತೆಗಳಿಂದ ರಮ್ಯಾಗೆ ಸಂದೇಶಗಳನ್ನು ಕಳಿಸಲಾಗಿತ್ತು.
ನಟಿ ರಮ್ಯಾ, ದರ್ಶನ್ ಮತ್ತೆ ಜೈಲಿಗೆ ಹೋದಾಗ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದರು. ಈ ಹೇಳಿಕೆಯಿಂದ ಕೆರಳಿದ ಕೆಲ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಟ್ರೋಲಿಂಗ್ಗೆ ಇಳಿದಿದ್ದರು. ರಮ್ಯಾ ಅವರಿಗೆ ದರ್ಶನ್ ಅಭಿಮಾನಿಗಳು ಅತ್ಯಂತ ಕೀಳು ಭಾಷೆ ಬಳಸಿ ಬೈದಿದ್ದರು. ತಮಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದವರ ವಿರುದ್ಧ ನಟಿ ರಮ್ಯಾ ಜುಲೈ 23ರಂದು ಪೊಲೀಸರಿಗೆ ದೂರು ಸಹ ನೀಡಿದ್ದರು.
ಇದನ್ನೂ ಓದಿ:ಗ್ಲಾಮರ್ ಅವತಾರದಲ್ಲಿ ಬಾಹುಬಲಿ ರಾಜಮಾತೆ ರಮ್ಯಾ ಕೃಷ್ಣನ್
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 50 ಸಾಮಾಜಿಕ ಜಾಲತಾಣ ಅಕೌಂಟ್ಗಳನ್ನು ಬಂದ್ ಮಾಡಿಸಿದ್ದರು. ಬಂಧನಕ್ಕೆ ಹೆದರಿ 20ಕ್ಕೂ ಹೆಚ್ಚು ಆರೋಪಿಗಳು ಪರಾರಿ ಆಗಿದ್ದರು. ಕೆಲವು ದಿನಗಳ ಹಿಂದಷ್ಟೆ ಬಂಧಿತ ಆರೋಪಿಗಳು ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಇತರೆ ಭದ್ರತೆಗಳನ್ನು ಒದಗಿಸಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.
ಇದೀಗ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದ್ದು, ಪ್ರಕರಣದ ವಿಚಾರಣೆ ಇನ್ನೂ ಚಾಲ್ತಿಯಲ್ಲಿದೆ. ಒಂದೊಮ್ಮೆ ಆರೋಪಿಗಳ ತಪ್ಪು ಸಾಬೀತಾದಲ್ಲಿ ಶಿಕ್ಷೆ ಸಹ ಅನುಭವಿಸಬೇಕಾಗಿರುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Thu, 16 October 25