ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಪ್ರತಿಷ್ಠೆ ಹೆಚ್ಚಿದೆ. ‘ಕೆಜಿಎಫ್: ಚಾಪ್ಟರ್ 2’, ‘777 ಚಾರ್ಲಿ’ ಮುಂತಾದ ಸಿನಿಮಾಗಳಿಂದ ಎಲ್ಲರೂ ಚಂದನವನದ ಕಡೆಗೆ ತಿರುಗಿ ನೋಡುವಂತಾಗಿದೆ. ಈಗ ‘ಕಾಂತಾರ’ (Kantara) ಸಿನಿಮಾ ಎಲ್ಲ ಕಡೆ ಧೂಳೆಬ್ಬಿಸುತ್ತಿದೆ. ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರನ್ನು ಪರಭಾಷೆಯ ನಟ-ನಟಿಯರು, ತಂತ್ರಜ್ಞರು ಮನಸಾರೆ ಹೊಗಳಿದ್ದಾರೆ. ಪ್ರಭಾಸ್, ಅನುಷ್ಕಾ ಶೆಟ್ಟಿ ಮುಂತಾದ ಸ್ಟಾರ್ ಕಲಾವಿದರು ಭೇಷ್ ಎಂದಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈ ಚಿತ್ರದ ಬಗ್ಗೆ ಏನೂ ಮಾತನಾಡಿಲ್ಲ. ಅದೇಕೋ ಗೊತ್ತಿಲ್ಲ, ಅವರು ಮೌನವಾಗಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಸಿನಿಮಾ ಜರ್ನಿ ಆರಂಭ ಮಾಡಿದ್ದೇ ಕನ್ನಡ ಚಿತ್ರರಂಗದಿಂದ. ಬಳಿಕ ಅವರಿಗೆ ಪರಭಾಷೆಯಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕವು ಎಂಬುದು ಬೇರೆ ಮಾತು. ರಶ್ಮಿಕಾ ನಟಿಸಿದ್ದ ಚೊಚ್ಚಲ ಸಿನಿಮಾ ‘ಕಿರಿಕ್ ಪಾರ್ಟಿ’ಗೆ ನಿರ್ದೇಶನ ಮಾಡಿದ್ದು ಇದೇ ರಿಷಬ್ ಶೆಟ್ಟಿ. ಈಗ ರಿಷಬ್ ಬಹುಬೇಡಿಕೆಯ ಸ್ಟಾರ್ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುತ್ತಿದ್ದಾರೆ. ಇಷ್ಟೆಲ್ಲ ಆದರೂ ತಮ್ಮ ಚೊಚ್ಚಲ ಸಿನಿಮಾದ ನಿರ್ದೇಶಕನ ಯಶಸ್ಸಿನ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸಾರ್ವಜನಿಕವಾಗಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಈವರೆಗೂ ಏನನ್ನೂ ಮಾತನಾಡದೇ ಇರುವುದು ಕೌತುಕಕ್ಕೆ ಕಾರಣ ಆಗಿದೆ.
‘ಕಾಂತಾರ’ ಸಿನಿಮಾ ಈಗ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ. ಬೇರೆ ಭಾಷೆಗಳಿಗೆ ಡಬ್ ಆಗಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಹಿಂದಿಯಲ್ಲಿ ರಿಲೀಸ್ ಆದ ಬಳಿಕ ಉತ್ತರ ಭಾರತದಲ್ಲಿನ ಸಿನಿಪ್ರಿಯರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ತೆಲುಗು ಪ್ರೇಕ್ಷಕರು ಕೂಡ ಚಿತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ. ಎಲ್ಲ ಭಾಷೆಗಳಿಂದ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಇಷ್ಟಾದರೂ ರಶ್ಮಿಕಾ ಮಂದಣ್ಣ ಕಡೆಯಿಂದ ಈ ಕನ್ನಡ ಸಿನಿಮಾದ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ‘ಕಿರಿಕ್ ಪಾರ್ಟಿ’ ಚಿತ್ರದಿಂದ ರಶ್ಮಿಕಾ ಮಂದಣ್ಣ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿತ್ತು. ಮೊದಲ ಸಿನಿಮಾದಲ್ಲೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಈಗ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಶೈನ್ ಆಗುತ್ತಿದಾರೆ. ಬಾಲಿವುಡ್ ಸಿನಿಮಾಗಳಲ್ಲೂ ನಟಿಸುತ್ತಾ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ಅವರು ನಟಿಸಿದ ‘ಗುಡ್ಬೈ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಈ ಚಿತ್ರ ಕಲೆಕ್ಷನ್ ಮಾಡಲಿಲ್ಲ.
‘ಕಾಂತಾರ’ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಮಾತನಾಡಲೇ ಬೇಕು ಎಂಬ ನಿಯಮವೇನೂ ಇಲ್ಲ. ಅದು ಅವರ ಆಯ್ಕೆಗೆ ಬಿಟ್ಟ ವಿಚಾರ. ಆದರೆ, ತಮ್ಮ ಚೊಚ್ಚಲ ಚಿತ್ರದ ನಿರ್ದೇಶಕರಿಗೆ ಈಗ ಇಷ್ಟು ದೊಡ್ಡ ಗೆಲುವು ಸಿಕ್ಕಿರುವಾಗ ಸೌಜನ್ಯಕ್ಕಾದರೂ ಒಮ್ಮೆ ಅಭಿನಂದನೆ ಸಲ್ಲಿಸಬಹುದಿತ್ತು ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.