
‘ಕೆಜಿಎಫ್’ ಸಿನಿಮಾಕ್ಕೆ ಸಂಗೀತ ನೀಡುವ ಮೊದಲು ಯಾರೋ ಕೆಲವರಿಗಷ್ಟೆ ಗೊತ್ತಿದ್ದ ಹೆಸರು ರವಿ ಬಸ್ರೂರು. ಆದರೆ ಈಗ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ಗೂ ರವಿ ಬಸ್ರೂರು ಸಂಗೀತವೇ ಬೇಕು. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ಗೂ ರವಿ ಬಸ್ರೂರೇ ಆಗಬೇಕು. ಅವರು ಸಂಗೀತ ನೀಡಿರುವ ಹಲವು ಸಿನಿಮಾಗಳು ಹಿಟ್ ಎನಿಸಿಕೊಂಡಿವೆ. ‘ಕೆಜಿಎಫ್’ ಹಾಡುಗಳು, ಹಿನ್ನೆಲೆ ಸಂಗೀತ ಈಗಲೂ ವೈರಲ್ ಪಟ್ಟಿಯಲ್ಲೇ ಇದೆ. ಆದರೆ ರವಿ ಬಸ್ರೂರು ಅವರೇ ಸಂಗೀತ ನೀಡಿದ್ದ ‘ಸಲಾರ್’ ಸಿನಿಮಾದ ಹಾಡುಗಳು, ಹಿನ್ನೆಲೆ ಸಂಗೀತ ‘ಕೆಜಿಎಫ್’ ರೀತಿ ದೊಡ್ಡ ಮ್ಯಾಜಿಕ್ ಮಾಡಲಿಲ್ಲ. ಈ ಬಗ್ಗೆ ರವಿ ಬಸ್ರೂರು ಮಾತನಾಡಿದ್ದಾರೆ.
‘ಸಲಾರ್’ ಹಾಡುಗಳು ಸಿನಿಮಾ ಬಿಡುಗಡೆ ಆದ ಕೂಡಲೇ ಹಿಟ್ ಆಗಲಿಲ್ಲ. ಆದರೆ ಇತ್ತೀಚೆಗೆ ಸಿನಿಮಾದ ಸಂಗೀತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರವಿ ಬಸ್ರೂರು ಅವರು ಹೇಳಿರುವಂತೆ ಅವರ ಉದ್ದೇಶ ಇದೇ ಆಗಿತ್ತಂತೆ. ಪ್ರಶಾಂತ್ ನೀಲ್ ಅವರು ಅಂಥಹಾ ಹಾಡುಗಳನ್ನೇ ಕೇಳಿದ್ದರಂತೆ. ‘ಸಿನಿಮಾದ ಹಾಡುಗಳು, ಸಂಗೀತ ಕೂಡಲೇ ಹಿಟ್ ಆಗಬಾರದು, ಕೆಲ ಸಮಯದ ಬಳಿಕ ಕಾಡುವಂತೆ ಇರಬೇಕು’ ಎಂದಿದ್ದರಂತೆ. ಅದರಂತೆ ಸಂಗೀತ ಮಾಡಿದರಂತೆ ರವಿ ಬಸ್ರೂರು.
ಇದನ್ನೂ ಓದಿ:‘ಸಲಾರ್ 2’ ಬಳಿಕ ತೆಲುಗಿನ ಮತ್ತೊಬ್ಬ ಸ್ಟಾರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ
‘ಸಲಾರ್’ ಸಿನಿಮಾ ಬಿಡುಗಡೆ ಆದಾಗ ಅದರ ಸಂಗೀತವನ್ನು ಎಲ್ಲರೂ ‘ಕೆಜಿಎಫ್’ ಜೊತೆ ಹೋಲಿಸಿ ನೋಡಿದರು. ಹಾಗಾಗಿ ಆಗ ಅದು ಅಷ್ಟು ಯಶಸ್ವಿ ಆಗಲಿಲ್ಲ. ಆದರೆ ಅದು ‘ಸಲಾರ್’ ಸಿನಿಮಾದ ಸಮಸ್ಯೆ ಅಲ್ಲ ‘ಕೆಜಿಎಫ್’ ಸಮಸ್ಯೆ ಎಂದಿದ್ದಾರೆ ರವಿ ಬಸ್ರೂರು. ಪ್ರಶಾಂತ್ ನೀಲ್ ಬಗ್ಗೆ ಮಾತನಾಡಿರುವ ಬಸ್ರೂರು, ‘ಪ್ರಶಾಂತ್ ಹಲವಾರು ಸಿನಿಮಾಗಳನ್ನು ಅಧ್ಯಯನ ಮಾಡುತ್ತಾರೆ. ಸಂಗೀತದ ಬಗ್ಗೆ ಅವರಿಗೆ ನಿಖರತೆ ಇದೆ. ಅವರು ಸ್ಪಷ್ಟವಾದ ಸೂಚನೆಗಳನ್ನು ಕೊಡುತ್ತಾರೆ. ಅವರು ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದು ನನ್ನ ಅದೃಷ್ಟ’ ಎಂದಿದ್ದಾರೆ ಬಸ್ರೂರು.
ರವಿ ಬಸ್ರೂರು ಈಗ ಹಲವಾರು ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ. ಜೂ ಎನ್ಟಿಆರ್ ನಟಿಸಿ, ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾಕ್ಕೆ ಬಸ್ರೂರು ಅವರದ್ದೇ ಸಂಗೀತ. ಅದರ ಜೊತೆಗೆ ನರೇಂದ್ರ ಮೋದಿ ಜೀವನ ಆಧರಿಸಿದ ಹೊಸ ಸಿನಿಮಾ ‘ಮಾ ವಂದೇ’ಗೂ ರವಿ ಬಸ್ರೂರು ಅವರದ್ದೇ ಸಂಗೀತ. ಇನ್ನೂ ಹಲವು ಸಿನಿಮಾಗಳಿಗೆ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ