ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಪವಿತ್ರಾ ಹಾಗೂ ಇತರೆ ಕೆಲವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮತ್ತೊಮ್ಮೆ ಮುಂದೂಡಿದೆ. ಇಂದು (ಅಕ್ಟೋಬರ್ 08) ಪ್ರಕರಣದ ಕೆಲ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮೊದಲಿಗೆ ನಡೆದು ವಕೀಲರು ವಾದಿಸಿದರು. ಬಳಿಕ ಪ್ರಕರಣದ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಸರಣಿ ಆರಂಭಿಸಿ, ದರ್ಶನ್ ಹಾಗೂ ಪವಿತ್ರಾ ಪರ ವಕೀಲರು ಪ್ರಕರಣದ ತನಿಖೆ ಬಗ್ಗೆ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಪ್ರಾರಂಭಿಸಿದರು. ಎಸ್ಪಿಪಿ ಅವರ ವಾದ ಸರಣಿ ಸುದೀರ್ಘವಾಗಿ ನಡೆದಿದ್ದು, ಅಂತಿಮವಾಗಿ ನ್ಯಾಯಾಲಯದ ಸಮಯ ಮೀರಿದ ಕಾರಣ ಪ್ರಕರಣದ ವಿಚಾರಣೆಯನ್ನು ನಾಳೆ ಅಂದರೆ ಅಕ್ಟೋಬರ್ 09 ರ ಮಧ್ಯಾಹ್ನ 12:30ಕ್ಕೆ ಮುಂದೂಡಲಾಯ್ತು.
ಅಕ್ಟೋಬರ್ ಮೂರು, ನಾಲ್ಕು, ಐದರಂದು ನಡೆದ ವಿಚಾರಣೆಯಲ್ಲಿ ದರ್ಶನ್ ಪರ ಹಿರಿಯ ವಕೀಲರಾದ ಸಿವಿ ನಾಗೇಶ್, ಪವಿತ್ರಾ ಪರ ವಕೀಲರು ತನಿಖೆಯಲ್ಲಿ ಹಲವು ಲೋಪದೋಷಗಳಿವೆ ಎಂದಿದ್ದರು. ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು, ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿಮಾಡಿದ್ದಾರೆ, ಕತೆ ಹೆಣೆದಿದ್ದಾರೆ ಎಂದು ಟೀಕೆ ಮಾಡಿದ್ದರು. ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಅರೇಬಿಯನ್ ನೈಟ್ಸ್ ಕತೆಗೆ ಹೋಲಿಕೆ ಮಾಡಿದ್ದರು.
ಇದನ್ನೂ ಓದಿ:ದರ್ಶನ್ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಇಂದು ವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ಆರೋಪಿಗಳ ಪರ ವಕೀಲರು ಎತ್ತಿರುವ ಪ್ರತಿ ಪ್ರಶ್ನೆಗೂ ಸಹ ಉತ್ತರ ಇದೆ ಎಂದು ಹೇಳಿಯೇ ವಾದ ಆರಂಭಿಸಿದರು. ಸಿವಿ ನಾಗೇಶ್ ಅವರು ಪ್ರಶ್ನೆ ಮಾಡಿದ್ದ, ಎತ್ತಿ ತೋರಿಸಿದ್ದ ಲೋಪದೋಷಗಳಿಗೆ ಬಹುತೇಕ ಉತ್ತರಗಳನ್ನು ಸ್ಪಷ್ಟತೆಯನ್ನು ಎಸ್ಪಿಪಿ ನೀಡಿದರು. ಮಾತ್ರವಲ್ಲದೆ, ದರ್ಶನ್ ಹಾಗೂ ಅವರ ತಂಡ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ ರೀತಿ, ಆ ನಂತರ ನಡೆದ ಘಟನೆಗಳು, ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆ ಎಲ್ಲವನ್ನೂ ಉಲ್ಲೇಖಿಸಿ, ‘ಇದು ದರ್ಶನ್ ರಕ್ತಚರಿತ್ರೆ’ ಎಂದು ಟೀಕೆ ಮಾಡಿದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಹಾಗೂ ಇತರ ಆರೋಪಿಗಳ ಬಂಧನವಾಗಿ ನಾಲ್ಕು ತಿಂಗಳಾಗಿದೆ. ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಾಲ್ಕು ಮಂದಿಗೆ ಈಗಾಗಲೇ ಜಾಮೀನು ದೊರೆತಿದೆ. ದರ್ಶನ್ರ ಜಾಮೀನಿಗಾಗಿ ರಾಜ್ಯದ ಹೆಸರಾಂತ ವಕೀಲ ಸಿವಿ ನಾಗೇಶ್ ವಾದ ಮಂಡಿಸುತ್ತಿದ್ದಾರೆ. ನಾಳೆಗೆ ವಿಚಾರಣೆ ಮುಂದೂಡಲಾಗಿದೆಯಾದರೂ ನಾಳೆಯೂ ಸಹ ಜಾಮೀನು ಸಿಗುವುದು ಅನುಮಾನವೇ ಎನ್ನಲಾಗುತ್ತಿದೆ. ನಾಳೆಯೂ ಸಹ ಎಸ್ಪಿಪಿ ಅವರ ವಾದ ಮುಂದುವರೆಯುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ