ಬೆಂಗಳೂರು: ‘ಹೀರೋ’ ಸಿನಿಮಾದ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸ್ಫೋಟಗೊಂಡಿತ್ತು. ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ದೊಡ್ಡ ಗಂಡಾಂತರದಿಂದ ಪಾರಾಗಿದ್ದರು. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ಈ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಆವತ್ತು ನಾವು ಮೈಮರೆತಿದ್ದರೆ ಇವತ್ತು ಹೀಗೆ ಇರಲು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಟಿವಿ9 ಕನ್ನಡದ ಜತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ ರಿಷಬ್, ಹೀರೋ ಸಿನಿಮಾದ ಶೂಟಿಂಗ್ ವೇಳೆ ಈ ಅಗ್ನಿ ಅವಘಡ ನಡೆದಿತ್ತು. ಪೆಟ್ರೋಲ್ ಬಾಂಬ್ ಬಳಸಿ ಶೂಟ್ ಮಾಡಲಾಗುತ್ತಿತ್ತು. ರಿಹರ್ಸಲ್ ಮಾಡುವಾಗ ಎಲ್ಲವೂ ಸರಿಯಾಗಿತ್ತು. ಆದರೆ, ಶೂಟ್ ಮಾಡುವಾಗ ತೊಂದರೆ ಆಗಿತ್ತು ಎಂದು ಘಟನೆ ಬಗ್ಗೆ ವಿವರಿಸಿದ್ದಾರೆ.
ನಮ್ಮ ಸಿನಿಮಾ ಛಾಯಾಗ್ರಾಹಕನ ಕಾಲು ಕೆಸರಲ್ಲಿ ಮುಳುಗಿ ಹೋಗಿತ್ತು. ಹಾಗಾಗಿ ಮುಂದೆ ಹೋಗಲು ಆಗಲಿಲ್ಲ. ನನಗೆ ಬೆಂಕಿ ಶಾಖ ತಾಗುತ್ತಿದ್ದಂತೆ ಎನೋ ತಪ್ಪಾಗಿದೆ ಎನ್ನುವುದು ಗೊತ್ತಾಗಿತ್ತು. ಆದರೆ, ಕೆಸರು ಇದ್ದಕಾರಣ ಬೇಗ ಅಲ್ಲಿಂದ ಹೊರ ಬರಲು ಸಾಧ್ಯವಾಗಿಲ್ಲ. ಘಟನೆ ವೇಳೆ ನನ್ನ ಬೆನ್ನು ಮತ್ತು ಕೂದಲಿಗೆ ಬೆಂಕಿ ಹತ್ತಿತ್ತು. ಆದರೆ, ನಾವು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾವುದೇ ತೊಂದರೆ ಆಗಲಿಲ್ಲ ಎಂದು ಘಟನೆಯ ಕರಾಳತೆ ಬಗ್ಗೆ ರಿಷಬ್ ಮಾಹಿತಿ ನೀಡಿದ್ದಾರೆ.
ನಾವು ತೆಗೆದುಕೊಂಡ ಎಚ್ಚರಿಕೆಯೇ ನಮ್ಮನ್ನು ಕಾಪಾಡಿದೆ. ಆವತ್ತು ನಾವು ಮೈಮರೆತಿದ್ದರೆ ಇವತ್ತು ಹೀಗೆ ಇರಲು ಆಗುತ್ತಿರಲಿಲ್ಲ. ಶೂಟಿಂಗ್ ವೇಳೆ ದುರಂತ ಸಂಭವಿಸಿ, ಸಾವು, ನೋವು ಆಗಿರುವುದನ್ನು ನಾವು ನೋಡಿದ್ದೇವೆ. ಇಂಥಹ ದೃಶ್ಯಗಳನ್ನ ಶೂಟ್ ಮಾಡೋವಾಗ ಎಚ್ಚರಿಕೆ ವಹಿಸೋದು ತುಂಬಾ ಮುಖ್ಯ. ನಮಗೆ ಬೆಂಕಿ ತಾಗಿದ್ದರಿಂದ ಒಂದು ಕ್ಷಣ ಎಲ್ಲರೂ ಭಯ ಬಿದ್ದಿದ್ದರು. ನಂತರ, ಆ ದೃಶ್ಯವನ್ನು ಮತ್ತೆ ಶೂಟ್ ಮಾಡಿದ್ದೇವೆ ಎಂದಿದ್ದಾರೆ.
ರಿಷಬ್ ಶೆಟ್ಟಿ ಅಭಿನಯದ ಹೀರೋ ಸಿನಿಮಾ ಮಾರ್ಚ್ 5ರಂದು ತೆರೆಗೆ ಬರುತ್ತಿದೆ. ಗಾನವಿ ಲಕ್ಷ್ಮಣ್ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಎಂ ಭರತ್ ರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದನ್ನೂ ಓದಿ: Rishab Shetty | ಶೂಟಿಂಗ್ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ