
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿ ಏಳು ದಿನಗಳಾಗಿವೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹವಾ ವೀಕೆಂಡ್ಗಳಲ್ಲಿ ಮಾತ್ರ. ಸೋಮವಾರದ ಬಳಿಕ ಕಲೆಕ್ಷನ್ ಕುಸಿಯಲಿದೆ ಎಂದು ಕೆಲವರು ಮಾತನಾಡಿಕೊಂಡಿದ್ದರು. ಅವರ ಕೊಂಕು ನುಡಿಗಳನ್ನು ಸುಳ್ಳಾಗಿಸಿರುವ ‘ಕಾಂತಾರ: ಚಾಪ್ಟರ್ 1’ ಸೋಮವಾರ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಮಂಗಳವಾರ ಅದಕ್ಕಿಂತಲೂ ಉತ್ತಮ ಕಲೆಕ್ಷನ್ ಆಗಿದೆ.
ಸಿನಿಮಾ ಬಿಡುಗಡೆ ಬಳಿಕದ ಮೊದಲ ಸೋಮವಾರ ಅಂದರೆ ನಿನ್ನೆ (ಅಕ್ಟೋಬರ್ 07) ಸಿನಿಮಾ ಭಾರತದಾದ್ಯಂತ ಸುಮಾರು 31.5 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿತ್ತು. ಅದರಲ್ಲೂ ಕರ್ನಾಟಕದಲ್ಲಿ ಸೋಮವಾರದಂದು ಹೆಚ್ಚು ಮೊತ್ತ ಗಳಿಸಿದ ಸಿನಿಮಾ ಎನಿಸಿಕೊಂಡಿತು. ‘ಬಾಹುಬಲಿ 2’ ಸಿನಿಮಾದ ದಾಖಲೆಯನ್ನು ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮುರಿದು ಹಾಕಿತು. ಇದೀಗ ಮಂಗಳವಾರದ ಕಲೆಕ್ಷನ್ ಸೋಮವಾರಕ್ಕಿಂತಲೂ ಹೆಚ್ಚಾಗಿದೆ.
ಮಂಗಳವಾರದಂದು ಭಾರತದಾದ್ಯಂತ 33.50 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಸೋಮವಾರ ಗಳಿಸಿದ್ದಕ್ಕಿಂತಲೂ ಎರಡು ಕೋಟಿ ಹೆಚ್ಚಿನ ಮೊತ್ತವನ್ನು ಸಿನಿಮಾ ಗಳಿಕೆ ಮಾಡಿದೆ. ಮಂಗಳವಾರ ಗಳಿಸಿದ 33.50 ಕೋಟಿ ರೂಪಾಯಿ ಮೂಲಕ ಇದೀಗ ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಒಟ್ಟು ಕಲೆಕ್ಷನ್ (ಭಾರತದಲ್ಲಿ) 290 ಕೋಟಿಯನ್ನು ದಾಟಿದೆ. ಬುಧವಾರದ ಅಂತ್ಯದ ವೇಳೆಗೆ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ದಾಟಲಿದೆ.
ಇದನ್ನೂ ಓದಿ:ದೆಹಲಿ ಸಿಎಂ ಭೇಟಿ ಮಾಡಿದ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡ
ಸಾಮಾನ್ಯವಾಗಿ ಸಿನಿಮಾಗಳು ಕಲೆಕ್ಷನ್ ದಿನೇ-ದಿನೇ ತಗ್ಗುತ್ತವೆ. ಅದರಲ್ಲೂ ವಾರದ ದಿನಗಳಲ್ಲಿ ಕಲೆಕ್ಷನ್ ಧಾರುಣವಾಗಿ ಕುಸಿಯುತ್ತದೆ. ಆದರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಲೆಕ್ಷನ್ ಏರುಗತಿಯಲ್ಲಿ ಸಾಗಿದೆ. ಬೆಂಗಳೂರಿನಲ್ಲಿ ಬುಧವಾರದ ಹಲವು ಶೋಗಳು ಮುಂಗಡವಾಗಿ ಬುಕಿಂಗ್ ಆಗಿರುವುದಾಗಿ ಬುಕ್ಮೈಶೋನಲ್ಲಿ ತೋರಿಸುತ್ತಿದೆ. ಆರಂಭದ ಮೂರು-ನಾಲ್ಕು ದಿನ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಸಿನಿಮಾ ನೋಡಿದ್ದರು. ಈಗ ಕುಟುಂಬ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಹಾಗಾಗಿ ಸಿನಿಮಾದ ಕಲೆಕ್ಷನ್ ಏರು ಗತಿಯಲ್ಲಿ ಸಾಗಿದೆ.
ಫ್ರಾಂಚೈಸ್ ಸಿನಿಮಾಗಳು ಅಥವಾ ಸೀಕ್ವೆಲ್ ಸಿನಿಮಾಗಳು ಭಾರತದಲ್ಲಿ ಭಾರಿ ದೊಡ್ಡ ಮೊತ್ತದ ಹಣ ಗಳಿಕೆ ಮಾಡಿರುವ ಇತಿಹಾಸ ಇದೆ. ‘ಬಾಹುಬಲಿ 2’, ‘ಕೆಜಿಎಫ್ 2’, ‘ಪುಷ್ಪ 2’ ಆದರೆ ಪ್ರೀಕ್ವೆಲ್ ಸಿನಿಮಾ ಒಂದು ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿರುವುದು ಇದೇ ಮೊದಲು. 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ