
ಕನ್ನಡದಲ್ಲಿ ‘ಕಾಂತಾರ’ (Kantara) ಸಿನಿಮಾ ಹೊಸ ಸೆನ್ಸೇಷನ್ ಸೃಷ್ಟಿ ಮಾಡಿದೆ. ಪ್ರೇಕ್ಷಕರು ಈ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಕರಾವಳಿಯ ಭೂತಕೋಲ, ದೈವಾರಾಧನೆ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ (Rishab Shetty) ಹೇಳಿರುವ ಕಥೆಗೆ ಜನರು ಫಿದಾ ಆಗಿದ್ದಾರೆ. ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡ ಈ ಚಿತ್ರದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ಈ ಮೂಲಕ ‘ಹೊಂಬಾಳೆ ಫಿಲ್ಮ್ಸ್’ ತೆಕ್ಕೆಗೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಸೇರ್ಪಡೆ ಆದಂತೆ ಆಗಿದೆ. ಕನ್ನಡದಲ್ಲಿ ಧೂಳೆಬ್ಬಿಸಿದ ‘ಕಾಂತಾರ’ ಈಗ ಹಿಂದಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಹೌದು, ಹಿಂದಿಗೆ ಈ ಚಿತ್ರವನ್ನು ಡಬ್ ಮಾಡಲಾಗಿದ್ದು, ಅಕ್ಟೋಬರ್ 14ರಂದು ರಿಲೀಸ್ ಆಗಲಿದೆ. ಬರೋಬ್ಬರಿ 2500 ಪರದೆಗಳಲ್ಲಿ ಬಿಡುಗಡೆ ಮಾಡಲು ‘ಹೊಂಬಾಳೆ ಫಿಲ್ಮ್ಸ್’ (Hombale Films) ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ.
‘ಕಾಂತಾರ’ ಸಿನಿಮಾದಿಂದ ರಿಷಬ್ ಶೆಟ್ಟಿ ಅವರ ಚಾರ್ಮ್ ಹೆಚ್ಚಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶಕವನ್ನೂ ಅವರೇ ಮಾಡಿದ್ದಾರೆ. ಸೆಪ್ಟೆಂಬರ್ 30ರಂದು ಕೇವಲ ಕನ್ನಡದಲ್ಲಿ ಮಾತ್ರ ಈ ಚಿತ್ರವನ್ನು ರಿಲೀಸ್ ಮಾಡಲಾಯಿತು. ಪರಭಾಷೆ ಮಂದಿ ಕೂಡ ಕನ್ನಡ ವರ್ಷನ್ ನೋಡಿ ಮೆಚ್ಚುಗೆ ಸೂಚಿಸಿದರು. ಎಲ್ಲ ಕಡೆಗಳಿಂದ ಉತ್ತಮ ವಿಮರ್ಶೆ ಸಿಕ್ಕಿದ್ದರಿಂದ ಉತ್ತರ ಭಾರತದಲ್ಲೂ ಈ ಚಿತ್ರಕ್ಕೆ ಡಿಮ್ಯಾಂಡ್ ಸೃಷ್ಟಿ ಆಗಿದೆ. ಹಾಗಾಗಿ ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
ವಿಜಯ್ ಕಿರಗಂದೂರು ಅವರು ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಮೂಲಕ ಅವರು ಉತ್ತರ ಭಾರತದ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದರು. ಈಗ ‘ಕಾಂತಾರ’ ಸಿನಿಮಾ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಚ್ಚರಿ ಏನೆಂದರೆ, ಈ ಸಿನಿಮಾ ಹಿಂದಿಗೆ ಡಬ್ ಆಗುವುದಕ್ಕೂ ಮುನ್ನ ಮುಂಬೈನ ಅನೇಕ ಚಿತ್ರಮಂದಿರಗಳಲ್ಲಿ ಕನ್ನಡ ವರ್ಷನ್ ಬಿಡುಗಡೆ ಮಾಡಲಾಗಿತ್ತು. ಅಲ್ಲಿನ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದ್ದು ವಿಶೇಷ.
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಕಿಶೋರ್ ಮುಂತಾದವರು ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ, ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣಕ್ಕೂ ಸಖತ್ ಮೆಚ್ಚುಗೆ ಸಿಕ್ಕಿದೆ. ಇತ್ತೀಚೆಗೆ ‘ಕಾಂತಾರ’ ಸಿನಿಮಾದ ಹಿಂದಿ ಟ್ರೇಲರ್ ಬಿಡುಗಡೆ ಮಾಡಲಾಯಿತು. ಯೂಟ್ಯೂಬ್ನಲ್ಲಿ ಮೂರು ದಿನಕ್ಕೆ 30 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಆ ಮೂಲಕ ಸಿನಿಮಾ ಮೇಲೆ ಹಿಂದಿ ಪ್ರೇಕ್ಷಕರಿಗೆ ಎಷ್ಟು ನಿರೀಕ್ಷೆ ಎಂಬುದು ಗೊತ್ತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:31 pm, Wed, 12 October 22