ರೂಪೇಶ್ ಶೆಟ್ಟಿ (Roopesh Shetty) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಅವರು ಈಗ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಅಮೃತ ಸಾರಥಿ ಎಂಬುವವರು ನಿರ್ದೇಶನ ಮಾಡುತ್ತಿರುವ ತಮಿಳು ಚಿತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಯೋಗಿ ಬಾಬು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ‘ಸನ್ನಿಧಾನಂ PO’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.
‘ಸನ್ನಿಧಾನಂ PO’ ಸಿನಿಮಾದ ಕಥೆ ತುಂಬಾನೇ ಸಿಂಪಲ್. ವ್ಯಕ್ತಿಯೋರ್ವ ಬಾಲ್ಯದಲ್ಲಿ ಶಬರಿಮಲೆ ಸಮೀಪ ತಾಯಿಯನ್ನು ಕಳೆದುಕೊಳ್ಳುತ್ತಾನೆ. ಇದರ ಸುತ್ತ ಕಥೆ ಸಾಗಲಿದೆ. ತಮಿಳಿನ ಜೊತೆಗೆ ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಕನ್ನಡದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿರುವುದರಿಂದ ಕುತೂಹಲ ಹೆಚ್ಚಿದೆ.
‘ನನ್ನ ಮೊದಲ ತಮಿಳು ಚಿತ್ರ ಸನ್ನಿಧಾನಮ್ PO ಶೂಟಿಂಗ್. ನಿಮ್ಮೆಲ್ಲರ ಆಶೀರ್ವಾದದಿಂದ ಭರದಿಂದ ಸಾಗುತ್ತಿದೆ. ಯೋಗಿ ಬಾಬು ಅವರ ಜತೆ ನಟಿಸುವುದೇ ನನ್ನ ಪಾಲಿನ ಅದೃಷ್ಟ. ನನ್ನ ಸಿನಿ ಪಯಣ ಈ ರೀತಿಯಾಗಿ ಸಾಗಲು ನೀವೇ ಮೊದಲ ಕಾರಣ. ನಿಮ್ಮ ಪ್ರೀತಿ ಪ್ರೋತ್ಸಾಹ ಎಂದೂ ಹಾಗೇ ಇರಲಿ. ದೇವರಿಗೆ ಧನ್ಯವಾದಗಳು’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಯೋಗಿ ಬಾಬು ಜತೆ ತಮಿಳು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ರೂಪೇಶ್ ಶೆಟ್ಟಿ
2023ರ ನವೆಂಬರ್ ತಿಂಗಳಲ್ಲಿ ಸಿನಿಮಾ ಘೋಷಿಸಲಾಗಿದೆ. ಈ ಚಿತ್ರದ ಮೂರನೇ ಹಂತದ ಶೂಟಿಂಗ್ ಈಗ ನಡೆಯುತ್ತಿದೆ. ಈ ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿ ಎಂದು ರೂಪೇಶ್ ಶೆಟ್ಟಿ ಅಭಿಮಾನಿಗಳು ಕೋರಿಕೊಳ್ಳುತ್ತಿದ್ದಾರೆ. ರೂಪೇಶ್ ಶೆಟ್ಟಿ ಅವರು ತುಳು ಸಿನಿಮಾಗಳಿಂದ ಬಣ್ಣದ ಬದುಕು ಆರಂಭಿಸಿದರು. 2015ರಲ್ಲಿ ರಿಲೀಸ್ ಆದ ‘ಐಸ್ ಕ್ರೀಮ್’ ಹೆಸರಿನ ತುಳು ಚಿತ್ರದ ಮೂಲಕ ಅವರು ಹೀರೋ ಆದರು. 2023ರಲ್ಲಿ ಅವರ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ರಿಲೀಸ್ ಆಯಿತು. ಅವರು ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ ವಿನ್ನರ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.