ಯೋಗಿ ಬಾಬು ಜತೆ ತಮಿಳು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ರೂಪೇಶ್ ಶೆಟ್ಟಿ
ನಟ ರೂಪೇಶ್ ಶೆಟ್ಟಿ ಅವರು ಬಹುಭಾಷೆಯಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಈಗಾಗಲೇ ತುಳು, ಕನ್ನಡ, ಕೊಂಕಣಿ ಭಾಷೆಗಳಲ್ಲಿ ನಟಿಸಿರುವ ಅವರು ಈಗ ತಮಿಳು ಚಿತ್ರರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಕಾಲಿವುಡ್ ಸಿನಿಮಾದಲ್ಲಿ ಅವರು ಯೋಗಿ ಬಾಬು ಜೊತೆ ಅಭಿನಯಿಸುತ್ತಿದ್ದಾರೆ ಎಂಬುದು ವಿಶೇಷ. ಈ ಸುದ್ದಿ ಕೇಳಿ ರೂಪೇಶ್ ಶೆಟ್ಟಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ ರಿಯಾಲಿಟಿ ಶೋನಲ್ಲಿ ವಿನ್ನರ್ ಆದ ಬಳಿಕ ನಟ ರೂಪೇಶ್ ಶೆಟ್ಟಿ (Roopesh Shetty) ಅವರ ಸಿನಿಜರ್ನಿಯ ವೇಗ ಹೆಚ್ಚಿತು. ತುಳು ಚಿತ್ರರಂಗದಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡ ಅವರು ಕನ್ನಡ ಚಿತ್ರರಂಗದಲ್ಲೂ ಬ್ಯುಸಿ ಆಗಿದ್ದಾರೆ. ತುಳುನಾಡಿನ ರೂಪೇಶ್ ಶೆಟ್ಟಿ ಅವರು ಪರಭಾಷೆಯಿಂದಲೂ ಅವಕಾಶ ಪಡೆಯುತ್ತಿದ್ದಾರೆ ಎಂಬುದು ವಿಶೇಷ. ಅವರಿಗೆ ಹಲವು ಅವಕಾಶಗಳು ಬರುತ್ತಿವೆ. ತುಂಬ ಕಾಳಜಿ ವಹಿಸಿ ಪಾತ್ರ ಮತ್ತು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಅವರು ಈಗ ತಮಿಳು ಚಿತ್ರರಂಗಕ್ಕೆ (Kollywood) ಎಂಟ್ರಿ ನೀಡುತ್ತಿದ್ದಾರೆ. ಕಾಲಿವುಡ್ನಲ್ಲಿ ನಟಿಸುತ್ತಿರುವ ಮೊದಲ ಸಿನಿಮಾದಲ್ಲೇ ಅವರಿಗೆ ಖ್ಯಾತ ನಟ ಯೋಗಿ ಬಾಬು (Yogi Babu) ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ.
ರೂಪೇಶ್ ಶೆಟ್ಟಿ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತುಳು ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಅವರಿಗೆ ಬಿಗ್ ಬಾಸ್ ಶೋನಿಂದ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಈಗ ತಮ್ಮ ಪಾಲಿಗೆ ಬರುತ್ತಿರುವ ಒಳ್ಳೆಯ ಅವಕಾಶಗಳನ್ನು ಅವರು ಬಾಚಿಕೊಳ್ಳುತ್ತಿದ್ದಾರೆ. ತಮಿಳಿನ ‘ಸನ್ನಿಧಾನಮ್ PO’ ಸಿನಿಮಾದಲ್ಲಿ ಅವರೊಂದು ಪಾತ್ರ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ: ಪೊಲೀಸ್ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ; ‘ಅಧಿಪತ್ರ’ ಸಿನಿಮಾಗೆ ಬಿರುಸಿನ ಶೂಟಿಂಗ್
ಕಾಲಿವುಡ್ ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳನ್ನು ಮಾಡುವ ಮೂಲಕ ಯೋಗಿ ಬಾಬು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ. ಅಂತಹ ಅನುಭವಿ ಕಲಾವಿದನ ಜೊತೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ರೂಪೇಶ್ ಶೆಟ್ಟಿ ಅವರು ಖುಷಿ ಆಗಿದ್ದಾರೆ. ಈ ಸಿನಿಮಾಗೆ ಮಧುರಾವ್ ಅವರು ಬಂಡವಾಳ ಹೂಡುತ್ತಿದ್ದಾರೆ. ಅಮುದ ಸಾರಥಿ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ.
ಇದನ್ನೂ ಓದಿ: ‘ಸಾನ್ಯಾನ ಹೀರೋಯಿನ್ ಮಾಡಿ ಅಂತ ನಾನು ಹೇಳೋಕಾಗಲ್ಲ’; ರೂಪೇಶ್ ಶೆಟ್ಟಿ
‘ಸನ್ನಿಧಾನಮ್ PO’ ಚಿತ್ರಕ್ಕೆ ಈಗ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ಜೂನ್ನಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಗುರಿ ಇಟ್ಟುಕೊಂಡಿದೆ. ವಿಶೇಷ ಏನೆಂದರೆ, ನಾಲ್ಕು ಭಾಷೆಗಳಲ್ಲಿ ‘ಸನ್ನಿಧಾನಮ್ PO’ ಬಿಡುಗಡೆ ಆಗಲಿದೆ. ತುಳು ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದ ರೂಪೇಶ್ ಶೆಟ್ಟಿ ಅವರು ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಅವರ ಪ್ರತಿಭೆಗೆ ತಕ್ಕಂತೆ ಒಳ್ಳೊಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಮೊದಲ ತಮಿಳು ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.