ಕಾರ್ತಿಕ್ ಜಯರಾಮ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ವೀರ್’ ಫಸ್ಟ್ ಲುಕ್ ಪೋಸ್ಟರ್
ಅಭಿಮಾನಿಗಳು ಕಾರ್ತಿಕ್ ಜಯರಾಮ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಅವರ ಹೊಸ ಸಿನಿಮಾದ ಮೋಷನ್ ಪೋಸ್ಟರ್ ಗಮನ ಸೆಳೆಯುತ್ತಿದೆ. ‘ದಿ ವೀರ್’ ಚಿತ್ರದಲ್ಲಿ ಜೆಕೆ ಅವರಿಗೆ ಬಾರ್ಟೆಂಡರ್ ಪಾತ್ರವಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಈ ಚಿತ್ರಕ್ಕೆ ಆರ್. ಲೋಹಿತ್ ನಾಯಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..
ಸ್ಯಾಂಡಲ್ವುಡ್ನ ಖ್ಯಾತ ನಟ ಕಾರ್ತಿಕ್ ಜಯರಾಮ್ (Karthik Jayaram) ಅಲಿಯಾಸ್ ಜೆಕೆ ಅವರು ಇಂದು (ಮೇ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಅವರು ಹೆಸರು ಮಾಡಿದ್ದಾರೆ. ಇಂದು ಅವರ ಜನ್ಮದಿನದ ಪ್ರಯುಕ್ತ ‘ದಿ ವೀರ್’ (The Veer) ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಆ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ಅಭಿಮಾನಿಗಳು ‘ದಿ ವೀರ್’ ಸಿನಿಮಾದ ಮೋಷನ್ ಪೋಸ್ಟರ್ ಹಂಚಿಕೊಂಡು ಜೆಕೆ (JK) ಅವರಿಗೆ ವಿಶ್ ಮಾಡುತ್ತಿದ್ದಾರೆ.
‘ದಿ ವೀರ್’ ಸಿನಿಮಾದಲ್ಲಿ ಕಾರ್ತಿಕ್ ಜಯರಾಮ್ ಅವರು ಬಾರ್ಟೆಂಡರ್ ಪಾತ್ರವನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಒಂದಷ್ಟು ತಯಾರಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರಿಗೆ ಈ ರೀತಿಯ ಪಾತ್ರ ಸಿಕ್ಕಿದೆ. ಆ ಕಾರಣದಿಂದ ಅವರ ಅಭಿಮಾನಿಗಳಲ್ಲಿ ಈ ಸಿನಿಮಾ ಮೇಲೆ ಕೌತುಕ ಮೂಡಿದೆ. ಪೋಸ್ಟರ್ ನೋಡಿದ ಸಿನಿಪ್ರಿಯರು ಕಮೆಂಟ್ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ.
View this post on Instagram
ಹೊಸ ನಿರ್ದೇಶಕ ಆರ್. ಲೋಹಿತ್ ನಾಯಕ್ ಅವರು ‘ದಿ ವೀರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಜೆಕೆ ನಟಿಸಿದ್ದ ‘ಐರಾವನ್’ ಸಿನಿಮಾದ ತಂಡದಲ್ಲೂ ಲೋಹಿತ್ ಕೆಲಸ ಮಾಡಿದ್ದರು. ಈಗ ಅವರು ‘ದಿ ವೀರ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ರೋಚಿತ್ ಅವರು ಈ ಚಿತ್ರದಲ್ಲಿ ವಿಲನ್ ಆಗಿದ್ದಾರೆ. ಮಂಜು ಪಾವಗಡ ಕೂಡ ನಟಿಸುತ್ತಿದ್ದಾರೆ. ಹೊಸ ನಟಿ ಪ್ರಣಿತಾ ಅವರು ಈ ಸಿನಿಮಾದ ಮೂಲಕ ನಾಯಕಿಯಾಗಿದ್ದಾರೆ.
ಇದನ್ನೂ ಓದಿ: ‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಮಾರ್ಚ್ 29ರಂದು ‘ದಿ ವೀರ್’ ಸಿನಿಮಾ ಸೆಟ್ಟೇರಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ಸಮಾಜಕ್ಕೆ ಸಂದೇಶ ಕೂಡ ನೀಡಲಿದೆ ಎಂದು ‘ಟೌಮ್ಸ್ ನೌ’ಗೆ ನೀಡಿದ ಸಂದರ್ಶನದಲ್ಲಿ ಕಾರ್ತಿಕ್ ಜಯರಾಮ್ ಅವರು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಧ್ರುವ ಎಂ.ಬಿ. ಅವರು ಸಂಗೀತ ನೀಡುತ್ತಿದ್ದಾರೆ. ಮೋಷನ್ ಪೋಸ್ಟರ್ನಲ್ಲಿ ಅವರ ಕೆಲಸಕ್ಕೆ ಮೆಚ್ಚುಗೆ ಸಿಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.