‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

‘ರುದ್ರ ಗರುಡ ಪುರಾಣ’ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ. ಕೆ.ಎಸ್. ನಂದೀಶ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಶ್ವಿನಿ ಲೋಹಿತ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಿಷಿ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಂದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಿಸಲಾಗಿದೆ.

‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್
‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ಅನಾವರಣ
Follow us
ಮದನ್​ ಕುಮಾರ್​
|

Updated on: May 01, 2024 | 8:14 PM

ನಟ ರಿಷಿ (Rishi) ಅವರು ಒಳ್ಳೊಳ್ಳೆಯ ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆಯುತ್ತಿದ್ದಾರೆ. ಈ ಮೊದಲು ‘ಕವಲುದಾರಿ’, ‘ಆಪರೇಶನ್ ಅಲಮೇಲಮ್ಮ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ ಅವರು ‘ಸೈತಾನ್’ ವೆಬ್ ಸಿರೀಸ್ ಮೂಲಕ ಒಟಿಟಿ ಪ್ರೇಕ್ಷಕರಿಗೂ ಹತ್ತಿರ ಆಗಿದ್ದಾರೆ. ಈಗ ರಿಷಿ ನಟಿಸಿರುವ ‘ರುದ್ರ ಗರುಡ ಪುರಾಣ’ (Rudra Garuda Purana) ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಅವರು ಈ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಿ ಶುಭ ಹಾರೈಸಿದ್ದಾರೆ. ಈ ಹಿಂದೆ ರಿಷಿ ನಟಿಸಿದ್ದ ‘ಕವಲುದಾರಿ’ ಸಿನಿಮಾವನ್ನು ಪುನೀತ್ ರಾಜ್​ಕುಮಾರ್ ಒಡೆತನದ ‘ಪಿ.ಆರ್.ಕೆ ಪ್ರೊಡಕ್ಷನ್ಸ್’ ಸಂಸ್ಥೆಯೇ ನಿರ್ಮಾಣ ಮಾಡಿತ್ತು. ಈಗ ರಿಷಿಯ ಹೊಸ ಸಿನಿಮಾಗೆ ಅಶ್ವಿನಿ ಅವರು ಸಾಥ್​ ನೀಡಿದ್ದಾರೆ.

‘ರುದ್ರ ಗರುಡ ಪುರಾಣ’ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ಗೆ ಸಿನಿಪ್ರಿಯರಿಂದ ಮೆಚ್ಚುಗೆ ಸಿಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೀವ್ಸ್​ ಆಗುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಈ ಸಿನಿಮಾದಲ್ಲಿ ರಿಷಿ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ನೋಡಿದ ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಾಗಿದೆ. ರಿಷಿ ಅವರು ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಖ್ಯಾತಿ ಗಳಿಸಿದ್ದಾರೆ.

ಅಶ್ವಿನಿ ಲೋಹಿತ್ ಅವರು ‘ಅಶ್ವಿನಿ ಆರ್ಟ್ಸ್’ ಸಂಸ್ಥೆಯ ಮೂಲಕ ‘ರುದ್ರ ಗರುಡ ಪುರಾಣ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಡಿಯರ್ ವಿಕ್ರಮ್’, ‘ಚಂಬಲ್’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಕೆ.ಎಸ್. ನಂದೀಶ್ ಅವರು ಈಗ ‘ರುದ್ರ ಗರುಡ ಪುರಾಣ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್, ಬೆಲೆ ಎಷ್ಟು ಕೋಟಿ?

ಕೆ.ಪಿ. ಅವರ ಸಂಗೀತ ನಿರ್ದೇಶನ, ಸಂದೀಪ್ ಕುಮಾರ್ ಅವರ ಛಾಯಾಗ್ರಹಣ, ಮನು ಶೇಡ್ಗಾರ್ ಅವರ ಸಂಕಲನದಲ್ಲಿ ‘ರುದ್ರ ಗರುಡ ಪುರಾಣ’ ಸಿನಿಮಾ ಮೂಡಿಬರುತ್ತಿದೆ. ಚಿತ್ರತಂಡ ಈಗಾಗಲೇ ಶೂಟಿಂಗ್​ ಮುಗಿಸಿದೆ. ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ರಿಷಿಗೆ ಜೋಡಿಯಾಗಿ ಪ್ರಿಯಾಂಕಾ ಕುಮಾರ್ ಅಭಿನಯಿಸಿದ್ದಾರೆ. ಇನ್ನುಳಿದ ಪಾತ್ರವರ್ಗದಲ್ಲಿ ಅವಿನಾಶ್, ವಿನೋದ್ ಆಳ್ವ, ಶಿವರಾಜ್ ಕೆ.ಆರ್. ಪೇಟೆ, ಕೆ.ಎಸ್. ಶ್ರೀಧರ್, ಗಿರಿ, ಅಶ್ವಿನಿ ಗೌಡ, ವಂಶಿ, ರಾಮ್ ಪವನ್, ಆಕರ್ಷ್, ಪ್ರಭಾಕರ್, ಜೋಸೆಫ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ಜಗಪ್ಪ, ರದ್ವಿ, ಪ್ರಸನ್ನ ಹಂಡ್ರಂಗಿ ಮುಂತಾದವರು ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.