
‘ಕೆಜಿಎಫ್: ಚಾಪ್ಟರ್ 2’ (KGF Chapter 2) ಜತೆ ಐಪಿಎಲ್ ತಂಡ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (Royal Challengers Bangalore) ಕೈಜೋಡಿಸಿದೆ. ಇತ್ತೀಚೆಗೆ ಆರ್ಸಿಬಿ ಹಾಗೂ ಎಲ್ಎಸ್ಜಿ ನಡುವಿನ ಪಂದ್ಯವನ್ನು ‘ಕೆಜಿಎಫ್ 2’ನಲ್ಲಿ ನಟಿಸಿದ ಸಂಜಯ್ ದತ್, ರವೀನಾ ಟಂಡನ್, ನಿರ್ಮಾಪಕ ವಿಜಯ್ ಕಿರಗಂದೂರು ವೀಕ್ಷಿಸಿದ್ದರು. ಸಂಜಯ್ ದತ್ ಜೆರ್ಸಿ ಮೇಲೆ ಅಧೀರ ಎಂದು ಬರೆದುಕೊಂಡಿರುವುದು ಸಾಕಷ್ಟು ಗಮನ ಸೆಳೆದಿತ್ತು. ಸಿನಿಮಾ ಮಂದಿ ಹೇಗೆ ಕ್ರಿಕೆಟ್ ವೀಕ್ಷಿಸಿದ್ದಾರೋ ಅದೇ ರೀತಿ, ಆರ್ಸಿಬಿ ಆಟಗಾರರು ‘ಕೆಜಿಎಫ್: 2’ ಸಿನಿಮಾ ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ನೋಡಿ ಎಲ್ಲರೂ ಸಖತ್ ಥ್ರಿಲ್ ಆಗಿದ್ದಾರೆ. ಈ ವಿಡಿಯೋವನ್ನು ಆರ್ಸಿಬಿ ತಂಡ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ.
ಕೊವಿಡ್ ಕಡಿಮೆ ಆಗಿದ್ದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿದೆ. ಹೀಗಾಗಿ, ಐಪಿಎಲ್ ಆಟಗಾರರು ಬಯೋಬಬಲ್ನಲ್ಲಿದ್ದಾರೆ. ಅಂದರೆ, ಈ ಆಟಗಾರರು ಹೊರಗಿನವರ ಜತೆ ಸಂಪರ್ಕಕ್ಕೆ ಬರುವಂತಿಲ್ಲ. ಮಾನಸಿಕ ಆರೋಗ್ಯದ ಮೇಲೂ ಇದು ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ ಸಿನಿಮಾ ನೋಡಿದರೆ ಮನಸ್ಸು ಹಗುರಾಗುತ್ತದೆ. ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ ಆಟಗಾರರಿಗೂ ರಿಲ್ಯಾಕ್ಸ್ ಫೀಲ್ ಆಗಿದೆ.
ಸಿನಿಮಾ ವೀಕ್ಷಿಸುವುದಕ್ಕೂ ಮೊದಲು, ಹರ್ಷಲ್ ಪಟೇಲ್, ಮೊಹ್ಮದ್ ಸಿರಾಜ್ ಮೊದಲಾದವರು ಚಿತ್ರದ ಬಗ್ಗೆ ನಿರೀಕ್ಷೆ ಇದೆ ಎಂದು ಹೇಳಿದ್ದರು. ಸಿನಿಮಾ ವೀಕ್ಷಿಸಿದ ನಂತರ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಪ್ರಶಾಂತ್ ನೀಲ್ ಅವರ ಕೆಲಸ ನಿಜಕ್ಕೂ ಮೆಚ್ಚಿಕೊಳ್ಳುವಂತದ್ದು. ಯಶ್ ಅವರ ಗಡ್ಡ ತುಂಬಾನೇ ಇಷ್ಟವಾಯಿತು’ ಎಂದು ಸಿರಾಜ್ ಹೇಳಿದ್ದಾರೆ. ಮ್ಯಾಕ್ಸ್ವೆಲ್, ಹರ್ಷಲ್ ಪಟೇಲ್ ಮೊದಲಾದವರು ಸಿನಿಮಾ ವೀಕ್ಷಿಸಿದ್ದಾರೆ. ‘ಪಾರ್ಟ್ 3’ ಬರುವ ಬಗ್ಗೆಯೂ ಎರಡನೇ ಚಾಪ್ಟರ್ ಕೊನೆಯಲ್ಲಿ ಸೂಚನೆ ಸಿಕ್ಕಿದೆ. ಈ ಬಗ್ಗೆಯೂ ಆಟಗಾರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ಕ್ರೀಡೆ ಮತ್ತು ಚಲನಚಿತ್ರ ಮನರಂಜನೆಯ ಪರಿಪೂರ್ಣ ಸಮ್ಮಿಲನ ಆಗಿದೆ. ಈ ಸಹಯೋಗವು ಭರಪೂರ ಮನರಂಜನೆ, ಗ್ಲಾಮರ್, ಚಲನಚಿತ್ರಗಳು, ಕ್ರೀಡೆಗಳ ಅದ್ಭುತ ಸಂಗಮವನ್ನು ಉಂಟುಮಾಡಲಿದೆ. ಕ್ರಿಕೆಟ್ ಮತ್ತು ಚಲನಚಿತ್ರಗಳಲ್ಲಿ ಅತ್ಯುತ್ಸಾಹ ಹೊಂದಿರುವ ದೇಶದಲ್ಲಿ, ಬೆಂಗಳೂರಿನ ಎರಡು ಅತ್ಯಂತ ಪ್ರೀತಿಯ ಕ್ಷೇತ್ರಗಳ ಹಿಂದೆಂದೂ ನೋಡಿರದ ಸಂಯೋಜನೆಯನ್ನು ಈ ಸಹಭಾಗಿತ್ವವು ರೂಪಿಸುತ್ತದೆ’ ಎಂದು ‘ಹೊಂಬಾಳೆ ಫಿಲ್ಮ್ಸ್’ ಈ ಮೊದಲು ತಿಳಿಸಿತ್ತು.
ಇದನ್ನೂ ಓದಿ: ಮದುವೆ ಆಹ್ವಾನ ಪತ್ರಿಕೆಯಲ್ಲೂ ‘ಕೆಜಿಎಫ್: ಚಾಪ್ಟರ್ 2’ ಡೈಲಾಗ್; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್
KGF Chapter 2: ಬಾಕ್ಸಾಫೀಸ್ ಆಯ್ತು.. ಈಗ ಐಎಂಡಿಬಿ ರೇಟಿಂಗ್ನಲ್ಲೂ ‘ಕೆಜಿಎಫ್ ಚಾಪ್ಟರ್ 2’ ದಾಖಲೆ