
ಪ್ರಭಾಸ್ (Prabhas) ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ನೀಡಲು ‘ಹೊಂಬಾಳೆ ಫಿಲ್ಮ್ಸ್’ ರೆಡಿ ಆಗಿದೆ. ಈ ಚಿತ್ರದ ಬಗ್ಗೆ ಹೊಸ ಹೊಸ ಅಪ್ಡೇಟ್ ನೀಡಲಾಗುತ್ತಿದೆ. ಈಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಎರಡು ಸೂಪರ್ ಸುದ್ದಿ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.
ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಸೇರಿ ಅನೇಕರು ‘ಸಲಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಸಿನಿಮಾನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ಡಿಸೆಂಬರ್ 1ರಂದು ‘ಸಲಾರ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ಇತ್ತೀಚೆಗೆ ಸುದ್ದಿ ಆಗಿತ್ತು. ಈ ವಿಚಾರವನ್ನು ಹೊಂಬಾಳೆ ಫಿಲ್ಮ್ಸ್ ಇಂದು ಅಧಿಕೃತ ಮಾಡಿದೆ. ‘ಸಲಾರ್ ಸೀಸ್ಫೈರ್ ಟ್ರೇಲರ್ ಡಿಸೆಂಬರ್ 1ರ ಸಂಜೆ 7:19ಕ್ಕೆ ರಿಲೀಸ್ ಆಗಲಿದೆ’ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
‘ಸಲಾರ್’ ಸಿನಿಮಾದ ಕಾರ್ನಾಟಕದ ಹಂಚಿಕೆಯನ್ನು ತಾವೇ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿದೆ. ‘ಕರುನಾಡಿನಾದ್ಯಂತ ವಿತರಣೆಯ ಹೊಣೆ ನಮ್ಮದು. ಅತ್ಯಮೋಘ ಅನುಭವ ನೀಡುವ ಭರವಸೆಯೊಂದಿಗೆ ನಿಮ್ಮ ಮುಂದೆ ಬರುತ್ತಿದೆ ಸಲಾರ್’ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
‘ಸಲಾರ್’ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಒಟ್ಟಿಗೆ ರಿಲೀಸ್ ಆಗುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುವ ಸಾಧ್ಯತೆ ಇದೆ.