ನಟ ಯಶ್ (Yash) ಅವರು ಅನೇಕರಿಗೆ ಮಾದರಿ ಆಗಿದ್ದಾರೆ. ಯಾವುದೇ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ ಅವರು ಇಂದು ನಂಬರ್ ಒನ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಎಷ್ಟೋ ಯುವಕರಿಗೆ ಯಶ್ ಸ್ಫೂರ್ತಿ. ಇನ್ನು, ‘ರಾಕಿಂಗ್ ಸ್ಟಾರ್’ ಮಾಡುವ ಕೆಲಸಗಳು ಇತರೆ ಸೆಲೆಬ್ರಿಟಿಗಳಿಗೂ ಸ್ಫೂರ್ತಿ ಆಗುತ್ತಿದೆ ಎಂಬುದು ವಿಶೇಷ. ಅಚ್ಚರಿ ಎಂದರೆ, ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಕೂಡ ಯಶ್ ಅವರ ಸ್ಟೈಲ್ಗೆ ಮನಸೋತಂತಿದೆ. ಮುಂಬರುವ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಯಶ್ ರೀತಿ ಗೆಟಪ್ ಧರಿಸುತ್ತಿದ್ದಾರೆ. ಹಾಗಂತ ಈ ಮಾತನ್ನು ಚಿತ್ರತಂಡದವರು ಹೇಳಿದ್ದಲ್ಲ. ಬದಲಿಗೆ, ಟೀಸರ್ ನೋಡಿದ ಬಳಿಕ ಪ್ರೇಕ್ಷಕರು ಮತ್ತು ಬಿ-ಟೌನ್ ವಲಯದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.
ಯಶ್ ಅವರು ಭಾರತೀಯ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ‘ಕೆಜಿಎಫ್’ ಚಿತ್ರ ಸೂಪರ್ ಹಿಟ್ ಆದ ಬಳಿಕ ಬೇರೆ ನಿರ್ಮಾಪಕರು ಮತ್ತು ನಟರು ಕೂಡ ಹೈ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಧೈರ್ಯ ತೋರಿಸುವಂತಾಯಿತು. ಅನೇಕ ಹೀರೋಗಳು ಯಶ್ ರೀತಿ ಗಡ್ಡ ಬಿಟ್ಟುಕೊಂಡು ಕಾಣಿಸಿಕೊಳ್ಳಲು ಶುರುಮಾಡಿದರು. ಈಗ ಸಲ್ಮಾನ್ ಖಾನ್ ಅವರು ಉದ್ದ ಕೂದಲಿನ ಗೆಟಪ್ಗೆ ಮರುಳಾಗಿದ್ದಾರೆ.
ಸಲ್ಲು ನಟಿಸುತ್ತಿರುವ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆ ಆಯಿತು. ಅದರಲ್ಲಿ ಸಲ್ಮಾನ್ ಖಾನ್ ಲುಕ್ ನೋಡಿದ ಬಹುತೇಕರಿಗೆ ಯಶ್ ನೆನಪಾಗಿದೆ. ಸಲ್ಲು ಹೀಗೆ ಉದ್ದ ಕೂದಲಿನ ಗೆಟಪ್ನಲ್ಲಿ ಕಾಣಿಸಿಕೊಳ್ಳಲು ಯಶ್ ಅವರೇ ಸ್ಫೂರ್ತಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕಂಟೆಂಟ್ ಕೂಡ ‘ಕೆಜಿಎಫ್ ರೀತಿಯೇ ಇದ್ದರೆ ಉತ್ತಮ ಎಂದು ನೆಟ್ಟಿಗರು ಕಮೆಂಟ್ ಮಾಡುತಿದ್ದಾರೆ.
#KisiKaBhaiKisiKiJaan@VenkyMama @hegdepooja @TheRaghav_Juyal @siddnigam_off @jassiegill @ishehnaaz_gill @palaktiwarii @farhad_samji @ShamiraahN @RaviBasrur @SKFilmsOfficial pic.twitter.com/odwrPWmlXN
— Salman Khan (@BeingSalmanKhan) September 5, 2022
‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಮೇಕಿಂಗ್ ಕೂಡ ‘ಕೆಜಿಎಫ್’ ಚಿತ್ರವನ್ನೇ ಹೋಲಬಹುದು. ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡುತ್ತಿರುವುದು ಕನ್ನಡದ ಪ್ರತಿಭೆ ರವಿ ಬಸ್ರೂರು ಎಂಬುದು ವಿಶೇಷ. ಟೀಸರ್ನಲ್ಲಿ ಹಿನ್ನೆಲೆ ಸಂಗೀತ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸಲ್ಮಾನ್ ಖಾನ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಸದ್ಯ ಸಲ್ಮಾನ್ ಖಾನ್ ಹಂಚಿಕೊಂಡಿರುವ ಟೀಸರ್ ಸಖತ್ ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:28 am, Tue, 13 September 22