ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಈ ಬಗ್ಗೆ ಅಪೋಲೋ ಆಸ್ಪತ್ರೆಯ ವೈದ್ಯರು ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡಿದ್ದಾರೆ. ಅಪಘಾತ ನಡೆದಾಗ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಐಸಿಯುನಲ್ಲಿ ಇರಿಸಲಾಗಿದೆ. ಆದರೆ ಅವರು ಚಿಕಿತ್ಸೆಗೆ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಇದು ಎಲ್ಲರ ಆತಂಕ್ಕೆ ಕಾರಣ ಆಗಿದೆ.
‘ಮೆದುಳಿನ ಬಲಭಾಗದಲ್ಲಿ ಹೆಚ್ಚು ಹೊಡೆತ ಬಿದ್ದು ತೀವ್ರ ರಕ್ತಸ್ರಾವ ಆಗಿತ್ತು. ನಿನ್ನೆ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಸರ್ಜರಿ ಮಾಡಿದೆವು. ಅದಾಗಿ 36 ಗಂಟೆ ಕಳೆದರೂ ಅವರ ಬ್ರೇನ್ ಕಡೆಯಿಂದ ಪ್ರತಿಕ್ರಿಯೆ ಇಲ್ಲ. ಮೆದುಳಿನ ಕೆಲಸಗಳು ನಿಂತು ಹೋಗಿದೆ. ಇದನ್ನು ಬ್ರೇನ್ ಫೇಲ್ಯೂರ್ ಎನ್ನುತ್ತೇವೆ. ಇದು ಮುಂದುವರಿದರೆ ಚೇತರಿಕೆ ಸಾಧ್ಯತೆ ಕಡಿಮೆ ಆಗುತ್ತದೆ. ದೈಹಿಕ ಕೆಲಸಗಳು ಸರಿಯಾಗಿವೆ’ ಎಂದು ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಶನಿವಾರ (ಜೂ.12) ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಅವರಿಗೆ ಆಕ್ಸಿಡೆಂಟ್ ಆಗಿತ್ತು. ಸ್ನೇಹಿತ ನವೀನ್ ಅವರ ಬೈಕ್ನಲ್ಲಿ ಹಿಂಬದಿ ಕುಳಿತು ವಿಜಯ್ ಪ್ರಯಾಣ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಅವರು ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. 36 ಗಂಟೆಗಳು ಕಳೆದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ.
Published On - 11:37 am, Mon, 14 June 21