ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಜಯಾ ಅವರು ನಿಧನರಾದ ಸುದ್ದಿ ಕೇಳಿಬಂದ ಬೆನ್ನಲ್ಲೇ ಮತ್ತೋರ್ವ ಹಿರಿಯ ನಟಿ ಸುರೇಖಾ ಮೃತರಾಗಿದ್ದಾರೆ. ಡಾ. ರಾಜ್ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ನಟಿಸುವ ಮೂಲಕ ಜನಪ್ರಿಯರಾಗಿದ್ದ ಅವರು ಹಲವು ವರ್ಷಗಳ ಕಾಲ ಚಂದನವನದಲ್ಲಿ ಸಕ್ರಿಯರಾಗಿದ್ದರು. ಶನಿವಾರ (ಜೂ.5) ರಾತ್ರಿ 9.30ರ ಸುಮಾರಿಗೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸುರೇಖಾ ಅವರಿಗೆ 66 ವರ್ಷ ವಯಸ್ಸಾಗಿತ್ತು. ಹೃದಯಾಘಾತವಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಸುರೇಖಾ ಬದುಕುಳಿಯಲಿಲ್ಲ. ಬನಶಂಕರಿ ಚಿತಾಗಾರದಲ್ಲಿ ಇಂದು (ಜೂ.6) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಸುರೇಖಾ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಕಲಾವಿದೆ ಆಗಿದ್ದರು. ಹಲವು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಅವರಿಗೆ ಅಪಾರ ಅಭಿಮಾನಿಗಳಿದ್ದರು. ಡಾ. ರಾಜ್ಕುಮಾರ್ ಅವರ ಹಲವಾರು ಸಿನಿಮಾಗಳಲ್ಲಿ ಸುರೇಖಾ ನಟಿಸಿದ್ದರು. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸುರೇಖಾ ಅಭಿನಯಿಸಿದ್ದರು. ಮಾಯಾ ಮನುಷ್ಯ, ನಾನು ಬಾಳಬೇಕು, ನಾನು ಅವನಿಲ್ಲೈ ಮುಂತಾದ ಸಿನಿಮಾಗಳಲ್ಲಿ ಅವರು ನಾಯಕಿ ಆಗಿದ್ದರು.
ಆಪರೇಷನ್ ಜಾಕ್ ಪಾಟ್ನಲ್ಲಿ ಸಿಐಡಿ 999, ತ್ರಿಮೂರ್ತಿ, ಒಲವು ಗೆಲುವು, ಗಿರಿ ಕನ್ಯೆ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಹುಲಿಯ ಹಾಲಿನ ಮೇವು ಮುಂತಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಶಿವಕನ್ಯೆ, ಕಾವೇರಿ, ಕೆಸರಿನ ಕಮಲ, ಬ್ಯಾಂಕರ್ ಮಾರ್ಗಯ್ಯ, ಆಲೆಮನೆ, ನಾಗರಹೊಳೆ, ತಾಯಿ ದೇವರು, ಭಕ್ತ ಸಿರಿಯಾಳ ಮುಂತಾದ ಚಿತ್ರಗಳಲ್ಲಿ ಸುರೇಖಾ ಮುಖ್ಯಭೂಮಿಕೆ ನಿಭಾಯಿಸಿದ್ದರು.
ಇದನ್ನೂ ಓದಿ:
ನಟಿ ಬಿ. ಜಯಾ ಮೃತದೇಹ ರಸ್ತೆ ಪಕ್ಕದಲ್ಲಿ ಯಾಕಿತ್ತು? ಕುಟುಂಬದವರಿಂದಲೇ ಸಿಕ್ತು ಸ್ಪಷ್ಟನೆ
Koti Ramu: ಕೋಟಿ ರಾಮು ನಿಧನದ ಬಳಿಕ ಮೊದಲ ಬಾರಿ ಮೌನ ಮುರಿದ ಪತ್ನಿ ಮಾಲಾಶ್ರೀ