ನಟಿ ಬಿ. ಜಯಾ ಮೃತದೇಹ ರಸ್ತೆ ಪಕ್ಕದಲ್ಲಿ ಯಾಕಿತ್ತು? ಕುಟುಂಬದವರಿಂದಲೇ ಸಿಕ್ತು ಸ್ಪಷ್ಟನೆ
B Jaya: ಸುಳ್ಳು ಸುದ್ದಿ ಹಬ್ಬಿಸುವವರಿಗೆ ಏನು ಸಿಗುತ್ತೋ ಗೊತ್ತಿಲ್ಲ. ಆದರೆ ನಮಗೆ ತುಂಬ ನೋವಾಗುತ್ತದೆ. ದಯವಿಟ್ಟು ಈ ರೀತಿ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ ಎಂದು ಬಿ. ಜಯಾ ಕುಟುಂಬದವರು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಜಯಾ ಅವರು ಜೂ.3ರಂದು ನಿಧನರಾದ ಸುದ್ದಿ ಕೇಳಿ ಇಡೀ ಚಿತ್ರರಂಗಕ್ಕೆ ಬೇಸರವಾಗಿತ್ತು. ಅದಕ್ಕಿಂತಲೂ ಹೆಚ್ಚು ನೋವು ನೀಡುವಂತಹ ಇನ್ನೊಂದು ಸುದ್ದಿ ಶುಕ್ರವಾರ (ಜೂ.4) ಕೇಳಿಬಂತು. ಬಿ. ಜಯಾ ಅವರ ಮೃತದೇಹವನ್ನು ಅನಾಥವಾಗಿ ಬಿಡಲಾಗಿದೆ. ಕಸದ ರಾಶಿಯ ಪಕ್ಕದಲ್ಲಿ ಮಲಗಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಅದಕ್ಕೆ ಈಗ ಬಿ. ಜಯಾ ಕುಟುಂಬದವರೇ ಸ್ಪಷ್ಟನೆ ನೀಡಿದ್ದಾರೆ. ಜಯ ಅವರ ಮೃತದೇಹ ರಸ್ತೆಯಲ್ಲಿ ಯಾಕಿತ್ತು ಎಂಬುದನ್ನು ವಿವರಿಸಿದ್ದಾರೆ.
ಬಿ. ಜಯಾ ಅವರ ಸಹೋದರ, ನಿರ್ದೇಶಕ ಮಲ್ಲೇಶ್ ಅವರ ಪುತ್ರಿ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ‘ಕೊವಿಡ್ ಹಾವಳಿ ಇರುವುದರಿಂದ ಜಯಾ ಅವರ ಅಂತ್ಯ ಸಂಸ್ಕಾರಕ್ಕೆ ಯಾರೂ ಬರುವುದು ಬೇಡ ಎಂದು ನಾವು ಚಿತ್ರರಂಗದವರಿಗೆ ಮತ್ತು ಕುಟುಂಬದವರಿಗೆ ಹೇಳಿದ್ವಿ. ಬಂದರೆ ಎಲ್ಲರಿಗೂ ತೊಂದರೆ ಆಗುತ್ತದೆ. 11.30ರಿಂದ 12 ಗಂಟೆವರೆಗೂ ನಮಗೆ ಸ್ಮಶಾನದಲ್ಲಿ ಸಮಯ ನಿಗದಿ ಮಾಡಿದ್ದರು. ಮೃತದೇಹವನ್ನು 11 ಗಂಟೆಗೆ ತೆಗೆದುಕೊಂಡು ಹೋದೆವು. ಅಲ್ಲಿನ ನಿಯಮದ ಪ್ರಕಾರ ನಾವು ಹೊರಗಡೆಯೇ ಪೂಜೆ ಮಾಡಬೇಕು. ಒಳಗಡೆ ತೆಗೆದುಕೊಂಡ ಹೋದ ತಕ್ಷಣವೇ ಅಂತ್ಯಕ್ರಿಯೆ ನೆರವೇರಿಸಬೇಕು. ಹಾಗಾಗಿ ನಾವು ಕೂಡ ಹೊರಗಡೆ ರಸ್ತೆ ಪಕ್ಕದಲ್ಲೇ ಪೂಜೆ ಮಾಡಿದೆವು. ಎಲ್ಲರೂ ಅಲ್ಲಿಯೇ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಜಯಾ ಮೃತದೇಹವನ್ನು ರಸ್ತೆ ಬದಿಯಲ್ಲಿ ಮಲಗಿಸಿದ್ದು ಮತ್ತು ಹೆಚ್ಚು ಜನ ಬಂದಿರಲಿಲ್ಲ ಎಂಬುದನ್ನೇ ಇಟ್ಟುಕೊಂಡು ವಿಡಿಯೋ ಮಾಡಿ ಕೆಲವರು ಅಪಪ್ರಚಾರ ಮಾಡಿದ್ದಾರೆ. ಅದು ತಪ್ಪು. ಮೇ 29ರಂದು ಜಯಾ ಅವರಿಗೆ ಸ್ಟ್ರೋಕ್ ಆದಾಗಿನಿಂದಲೂ ನಾವು ಚೆನ್ನಾಗಿ ನೋಡಿಕೊಂಡಿದ್ದೇವೆ. ಹಲವು ಕಡೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಏನು ಸಿಗುತ್ತೋ ಗೊತ್ತಿಲ್ಲ. ಆದರೆ ನಮಗೆ ತುಂಬ ನೋವಾಗುತ್ತದೆ. ದಯವಿಟ್ಟು ಈ ರೀತಿ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.
ಕೆಲ ದಿನದಿಂದ ಜಯಾ ಅವರಿಗೆ ವಯೋಸಹಜ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ:
B Jaya Death: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಜಯಾ ನಿಧನ
ನಿಧನರಾಗುವುದಕ್ಕೂ ಮುನ್ನ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮಾಡಿದ್ದರು ದೇವರು ಮೆಚ್ಚುವ ಕೆಲಸ