‘ಉಪ್ಪಿ ಫೌಂಡೇಶನ್ಗೆ ಯಾರೂ ದೇಣಿಗೆ ಕೊಡಬೇಡಿ’; ಸ್ವತಃ ಉಪೇಂದ್ರ ಈ ರೀತಿ ಹೇಳಲು ಕಾರಣವೇನು?
Uppi Charitable Foundation: ಒಂದು ಒಳ್ಳೆಯ ಉದ್ದೇಶದಿಂದಲೇ ಉಪೇಂದ್ರ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಜನರು ಇನ್ಮುಂದೆ ಉಪ್ಪಿ ಚಾರಿಟೇಬಲ್ ಫೌಂಡೇಶನ್ಗೆ ದೇಣಿಗೆ ನೀಡಬಾರದು ಎಂದು ಅವರು ಹೇಳಿದ್ದಾರೆ.
ಕೊರೊನಾ ವೈರಸ್ ಎರಡನೇ ಅಲೆ ಆರಂಭ ಆದಾಗಿನಿಂದಲೂ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ ಜಾರಿಯಾದ ಪರಿಣಾಮ ಬಹುತೇಕರಿಗೆ ನಿರುದ್ಯೋಗ ಕಾಡುತ್ತಿದೆ. ಇಂಥ ಕಠಿಣ ಸಂದರ್ಭದಲ್ಲಿ ಹೊಟ್ಟೆಪಾಡು ನಡೆಯುವುದು ಕಷ್ಟ. ಕುಟುಂಬದವರನ್ನು ನೋಡಿಕೊಳ್ಳುವುದು ಕೂಡ ಸುಲಭವಲ್ಲ. ಅದನ್ನು ಮನಗಂಡಿರುವ ಉಪೇಂದ್ರ ಅವರು ಅನೇಕರಿಗೆ ನೆರವು ನೀಡಲು ಮುಂದಾದರು. ಉಪ್ಪಿ ಕೆಲಸಕ್ಕೆ ಕೈ ಜೋಡಿಸಿದ ಅನೇಕರು ದೇಣಿಗೆ ನೀಡಿದರು. ದಿನಸಿ, ತರಕಾರಿಗಳನ್ನೂ ತಂದುಕೊಟ್ಟರು. ಅದನ್ನೆಲ್ಲ ಅಗತ್ಯ ಇರುವವರಿಗೆ ಉಪೇಂದ್ರ ವಿತರಿಸಿದರು. ಆದರೆ ಇನ್ಮುಂದೆ ಯಾರಿಂದಲೂ ದೇಣಿಗೆ ಪಡೆಯಬಾರದು ಎಂದು ಉಪೇಂದ್ರ ನಿರ್ಧರಿಸಿದ್ದಾರೆ.
ಈ ಬಗ್ಗೆ ಸ್ವತಃ ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಈ ರೀತಿ ಹೇಳುವುದರ ಹಿಂದೆ ಒಂದು ಉದ್ದೇಶ ಕೂಡ ಇದೆ. ಜನರು ಉಪ್ಪಿ ಫೌಂಡೇಶನ್ಗೆ ದೇಣಿಗೆ ನೀಡುವ ಬದಲು ನೇರವಾಗಿ ತಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಲಿ ಎಂಬುದು ‘ರಿಯಲ್ ಸ್ಟಾರ್’ ಆಶಯ. ಹಾಗಾಗಿ ಅವರು ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಅನೇಕ ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಉಪೇಂದ್ರ ಅವರಿಗೆ ದೇಣಿಗೆ ನೀಡಿದ್ದರು.
‘ಇಲ್ಲಿಯವರೆಗೂ ನಾವು ಯಾರನ್ನೂ ಏನೂ ಕೇಳದಿದ್ದರೂ ತುಂಬಾ ಹೃದಯವಂತರು ನಮ್ಮ ಮೂಲಕ ವಿತರಣೆಯಾಗಲೆಂದು ದಿನಸಿ, ಹಣ್ಣು, ತರಕಾರಿಗಳು ಮುಂತಾದವುಗಳನ್ನು ಕೊಟ್ಟಿದ್ದಾರೆ. ನಮ್ಮ ಉಪ್ಪಿ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ಗೆ ಧನ ಸಹಾಯವನ್ನೂ ಮಾಡಿದ್ದಾರೆ. ಅವುಗಳೆಲ್ಲವನ್ನೂ ಸೂಕ್ತವಾಗಿ ಬೇರೆ ಬೇರೆ ಕಡೆ ಸಂಕಷ್ಟದಲ್ಲಿರುವವರಿಗೆ ವಿತರಿಸಲಾಗಿದೆ, ಇನ್ನೂ ವಿತರಿಸಲಾಗುತ್ತಿದೆ. ಸಹೃದಯತೆ ಮೆರೆದಂತಹ ತಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು’ ಎಂದು ಉಪೇಂದ್ರ ತಿಳಿಸಿದ್ದಾರೆ.
Thank You ??? pic.twitter.com/GRct2ODGaU
— Upendra (@nimmaupendra) June 3, 2021
‘ಇನ್ನು ಮುಂದೆ ತಾವುಗಳು ಯಾರಿಗಾದರೂ ಸಹಾಯ ಮಾಡಬೇಕೆಂದರೆ ನಿಮ್ಮ ಸುತ್ತಮುತ್ತ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ ನೀವೇ ನೇರವಾಗಿ ಸಹಾಯ ಮಾಡಿ. ಉಪ್ಪಿ ಫೌಂಡೇಶನ್ಗೆ ಹಣ ಮತ್ತು ಯಾವುದೇ ಕೊಡುಗೆಗಳನ್ನು ಇನ್ನು ಮುಂದೆ ನಾವು ಸ್ವೀಕರಿಸುವುದನ್ನು ನಿಲ್ಲಿಸುತ್ತಿದ್ದೇವೆ. ಇಲ್ಲಿಯವರೆಗೂ ಉಪ್ಪಿ ಫೌಂಡೇಶನ್ಗೆ ಉಪೇಂದ್ರರವರ ಹಣ, ನಿಮ್ಮೆಲ್ಲರಿಂದ ಬಂದಂತಹ ಹಣ ಅದರ ಖರ್ಚು ಮತ್ತು ಎಲ್ಲಾ ಅಕೌಂಟ್ಸ್ ಸ್ಟೇಟ್ಮೆಂಟ್ಸ್ ಮಾಹಿತಿಗಳನ್ನು ಸದ್ಯದಲ್ಲೇ ಬಹಿರಂಗ ಪಡಿಸುತ್ತೇವೆ’ ಎಂದು ಉಪ್ಪಿ ಫೌಂಡೇಶನ್ ಪರವಾಗಿ ಉಪೇಂದ್ರ ಅವರು ಮಾಹಿತಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಉಪೇಂದ್ರ ರೆಸಾರ್ಟ್ ಕಟ್ಟಿದ್ದು ರೈತರ ಭೂಮಿಯಲ್ಲಾ? ಆರೋಪಕ್ಕೆ ರಿಯಲ್ ಸ್ಟಾರ್ ಖಡಕ್ ಉತ್ತರ
ರಾಕಿಂಗ್ ಸ್ಟಾರ್ ಯಶ್ ಮಾಡಿದ ಸಹಾಯದ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು?
Published On - 3:41 pm, Fri, 4 June 21