ಉಪೇಂದ್ರ ರೆಸಾರ್ಟ್ ಕಟ್ಟಿದ್ದು ರೈತರ ಭೂಮಿಯಲ್ಲಾ? ಆರೋಪಕ್ಕೆ ರಿಯಲ್ ಸ್ಟಾರ್ ಖಡಕ್ ಉತ್ತರ
ತಮ್ಮ ಮೇಲೆ ಎದುರಾದ ಆರೋಪಕ್ಕೆ ಪ್ರತಿಕ್ರಿಯೆ ನೀಡುವ ಸಲುವಾಗಿ ಉಪೇಂದ್ರ ಒಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ಏನಾದರೂ ಹೇಳುವುದಕ್ಕಿಂತ ಮುಂಚೆ ದಾಖಲೆಗಳನ್ನು ಪರಿಶೀಲಿಸಿ ಎಂದು ಅವರು ಹೇಳಿದ್ದಾರೆ.
ಕೊರೊನಾ ಎರಡನೇ ಅಲೆ ಆರಂಭ ಆದಾಗಿನಿಂದ ನಟ ಉಪೇಂದ್ರ ಅವರು ಜನರ ಸಹಾಯಕ್ಕೆ ನಿಂತಿದ್ದಾರೆ. ಲಾಕ್ಡೌನ್ ಕಾರಣದಿಂದ ದುಡಿಮೆ ಇಲ್ಲದೆ ಮನೆಯಲ್ಲಿ ಕಷ್ಟಪಡುತ್ತಿರುವ ಅನೇಕರಿಗೆ ಅವರು ನೆರವಾಗಿದ್ದಾರೆ. ಚಿತ್ರರಂಗದ ಬಡ ಕಾರ್ಮಿಕರಿಗೆ, ಹಿರಿಯ ಕಲಾವಿದರಿಗೆ, ಕಷ್ಟದಲ್ಲಿರುವ ತಂತ್ರಜ್ಞರಿಗೆ ಅವರು ಅಗತ್ಯ ವಸ್ತು ಮತ್ತು ದಿನಸಿ ಕಿಟ್ಗಳನ್ನು ವಿತರಿಸಿದ್ದಾರೆ. ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸುವ ಮೂಲಕ ಅನ್ನದಾತರಿಗೂ ಉಪ್ಪಿ ನೆರವಾಗಿದ್ದಾರೆ. ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡುತ್ತಿರುವ ಅವರ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ಆರೋಪ ಎದುರಾಯಿತು. ರೈತರ ಭೂಮಿಯಲ್ಲಿ ಉಪೇಂದ್ರ ರೆಸಾರ್ಟ್ ಕಟ್ಟಿದ್ದಾರೆ ಎಂಬ ಆರೋಪ ಕೇಳಿಬಂತು. ಅದಕ್ಕೆ ಸ್ವತಃ ಉಪ್ಪಿ ಉತ್ತರ ನೀಡಿದ್ದಾರೆ.
ತಮ್ಮ ಮೇಲೆ ಎದುರಾದ ಆರೋಪಕ್ಕೆ ಪ್ರತಿಕ್ರಿಯೆ ನೀಡುವ ಸಲುವಾಗಿ ಅವರು ಒಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ‘ರೈತರ ಭೂಮಿ ಕಿತ್ತುಕೊಂಡು ನಾವು ಅಲ್ಲಿ ರೆಸಾರ್ಟ್ ಮಾಡಿದೀವಿ ಎಂದು ಒಬ್ಬರು ಆರೋಪ ಮಾಡಿದ್ದಾರೆ. ದಯವಿಟ್ಟು ತಾವು ಏನಾದರೂ ಹೇಳುವುದಕ್ಕಿಂತ ಮುಂಚೆ ದಾಖಲೆಗಳನ್ನು ಪರಿಶೀಲಿಸಿ. ಸುಮಾರು 13-14 ವರ್ಷಗಳ ಹಿಂದೆ ಅಲ್ಲಿ ವಿಲೇಜ್ ಅಂತ ಒಂದು ರೆಸಾರ್ಟ್ ಇತ್ತು. ಅದು ಹರಾಜಿಗೆ ಬಂತಿತ್ತು. ಹರಾಜಿನಲ್ಲಿ ಸರ್ಕಾರದಿಂದ ನೇರವಾಗಿ ಖರೀದಿಸಿ ನಾವು ರುಪ್ಪೀಸ್ ರೆಸಾರ್ಟ್ ಮಾಡಿದ್ವಿ. ಮೊದಲೂ ಆ ಜಾಗ ರೆಸಾರ್ಟ್ ಆಗಿತ್ತು’ ಎಂದು ಉಪೇಂದ್ರ ಹೇಳಿದ್ದಾರೆ.
‘ಆ ರೆಸಾರ್ಟ್ನ ಹಿಂದಿರುವುದು ಕೃಷಿ ಭೂಮಿ. ಅದನ್ನು ಶಿವಣ್ಣ ಅವರಿಂದ ಖರೀದಿಸಿದ್ದು. ಅದರಲ್ಲಿ ನಾವು ಇಂದಿಗೂ ವ್ಯವಸಾಯ ಮಾಡ್ತಾ ಇದೀವಿ. ಹಲವಾರು ತರಕಾರಿ ಬೆಳೆದಿರುವುದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ ಕೂಡ. ಅಷ್ಟೂ ನಿಮಗೆ ಅನುಮಾನ ಇದ್ದರೆ ರೆಸಾರ್ಟ್ಗೆ ಬಂದು ನೋಡಿ. ಅದರ ಹಿಂದಿರುವ ಜಮೀನನ್ನೂ ನೋಡಿ. ಅದು-ಇದು ಒಂದೇ ಎಂದು ತಿಳಿದುಕೊಳ್ಳಬೇಡಿ’ ಎಂದು ಉಪೇಂದ್ರ ಉತ್ತರ ನೀಡಿದ್ದಾರೆ.
ಪ್ರಜಾಕೀಯ ಪಕ್ಷ ಹೊಂದಿರುವ ಉಪೇಂದ್ರ ಅವರು ಆಡಳಿತ ಪಕ್ಷಗಳನ್ನು ಯಾಕೆ ಖಂಡಿಸುವುದಿಲ್ಲ? ಹೋರಾಟಗಳನ್ನು ಯಾಕೆ ಮಾಡುವುದಿಲ್ಲ ಎಂಬ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ. ‘ಈ ಹಿಂದೆ ಬೇರೆ ಪಕ್ಷಗಳು ಅಧಿಕಾರದಲ್ಲಿ ಇದ್ದಾಗಲೂ ನಾನು ಖಂಡಿಸಿಲ್ಲ. ಹೋರಾಟ ಮಾಡಿಲ್ಲ. ಯಾಕೆಂದರೆ ಅದರಲ್ಲಿ ನನಗೆ ನಂಬಿಕೆ ಇಲ್ಲ. ಮೂಲವಾಗಿ ಇಲ್ಲಿ ಜನರು ಬದಲಾವಣೆ ಆಗಬೇಕು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಕಡುಕಷ್ಟ ಕಾಲದಲ್ಲಿ ಹಿರಿಯ ಕಲಾವಿದರ ಕೈ ಹಿಡಿದ ಉಪೇಂದ್ರ; ಮನಸಾರೆ ಹರಸಿದ ಜೀವಗಳು
‘ನಾನು ಮುಖ್ಯಮಂತ್ರಿ ಆಗ್ಬೇಕು; ನೀವು ನನ್ನ ಗೆಲ್ಲಿಸ್ತೀರಾ?’; ಉಪೇಂದ್ರ ಕೇಳಿದ ಪ್ರಶ್ನೆಗೆ ಜನ ಕೊಟ್ಟ ಉತ್ತರ ಏನು?