‘ನಾನು ಮುಖ್ಯಮಂತ್ರಿ ಆಗ್ಬೇಕು; ನೀವು ನನ್ನ ಗೆಲ್ಲಿಸ್ತೀರಾ?’; ಉಪೇಂದ್ರ ಕೇಳಿದ ಪ್ರಶ್ನೆಗೆ ಜನ ಕೊಟ್ಟ ಉತ್ತರ ಏನು?
ಉಪೇಂದ್ರ ಅವರ ಈ ಪೋಸ್ಟ್ ವೈರಲ್ ಆಗಿದೆ. ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಲಾಕ್ಡೌನ್ ಸಂದರ್ಭದಲ್ಲಿ ಉಪ್ಪಿ ಮಾಡುತ್ತಿರುವ ಜನಪರ ಕೆಲಸಗಳನ್ನು ಜನರು ಗಮನಿಸಿದ್ದಾರೆ.
ನಟ ಉಪೇಂದ್ರ ಅವರು ತಮ್ಮದೇ ಹಾದಿಯಲ್ಲಿ ಸಾಗುತ್ತ ಜನಸೇವೆ ಮಾಡುತ್ತಿದ್ದಾರೆ. ಈಗ ಎಲ್ಲೆಲ್ಲೂ ಕೊರೊನಾ ವೈರಸ್ ಕಾಟ ಕೊಡುತ್ತಿರುವುದರಿಂದ ಅನೇಕರ ಬದುಕು ಸಂಕಷ್ಟದಲ್ಲಿದೆ. ಅಂಥವರಿಗೆಲ್ಲ ಸಹಾಯ ಮಾಡಲು ಉಪೇಂದ್ರ ಹಗಲಿರುಳು ಕಷ್ಟಪಡುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿರುವ ಅವರು ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯದಲ್ಲೂ ದೊಡ್ಡ ಬದಲಾವಣೆ ತರಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ, ಮಾಧ್ಯಮಗಳ ಸಂದರ್ಶನಗಳ ಮೂಲಕ ತಮ್ಮ ನಿಲುವು ಏನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈಗ ಅವರು ಕೇಳಿರುವ ಒಂದು ಪ್ರಶ್ನೆಗೆ ಜನರಿಂದ ಬಗೆಬಗೆಯ ಉತ್ತರ ಬಂದಿದೆ.
ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಾನು ಉಪೇಂದ್ರ… ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ? ನೀವು ನನ್ನನ್ನ ಗೆಲ್ಲಿಸ್ತೀರಾ?’ ಎಂಬ ಪ್ರಶ್ನೆಯೊಂದಿಗೆ ಅವರು ಮಾತು ಆರಂಭಿಸಿದ್ದಾರೆ.
ಈ ಪೋಸ್ಟ್ನಲ್ಲಿ ಅವರು ತಮ್ಮ ಪ್ರಜಾಕೀಯದ ಆಶಯವನ್ನು ಇನ್ನಷ್ಟು ಒತ್ತಿಹೇಳುವ ಪ್ರಯತ್ನ ಮಾಡಿದ್ದಾರೆ. ಸದ್ಯ ಉಪೇಂದ್ರ ಅವರ ಈ ಪೋಸ್ಟ್ ವೈರಲ್ ಆಗಿದೆ. ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಲಾಕ್ಡೌನ್ ಸಂದರ್ಭದಲ್ಲಿ ಉಪ್ಪಿ ಮಾಡುತ್ತಿರುವ ಜನಪರ ಕೆಲಸಗಳನ್ನು ಜನರು ಗಮನಿಸಿದ್ದಾರೆ. ಹಾಗಾಗಿ ತಮ್ಮ ಸಂಪೂರ್ಣ ಬೆಂಬಲ ನಿಮಗಿದೆ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಉಪೇಂದ್ರಗೆ ಕೆಲವು ಸಲಹೆಗಳನ್ನೂ ಜನರು ನೀಡಿದ್ದಾರೆ.
‘ಸರ್ ನಿಮ್ಮ ಆಲೋಚನೆಗಳು ಸರಿಯಾಗಿಯೇ ಇದೆ. ಆದರೆ ಒಂದು ಪಕ್ಷವನ್ನು ನಡೆಸಲು ಒಬ್ಬ ಸಮರ್ಥ ನಾಯಕ ಬೇಕು. ನೀವು ಆ ಜವಾಬ್ದಾರಿ ತೆಗೆದುಕೊಂಡು ಮುಖ್ಯಮಂತ್ರಿ ಆಗುವುದಾದರೆ ಯುವ ಸಮೂಹ ನಿಮ್ಮನ್ನು ಖಂಡಿತವಾಗಿ ಬೆಂಬಲಿಸುತ್ತೇವೆ. ಇಷ್ಟು ದಿನ ಕೇವಲ ಜಾತಿ, ಧರ್ಮ, ಭ್ರಷ್ಟಾಚಾರ ನೋಡಿ ನೋಡಿ ಸಾಕಾಗಿದೆ. ರಾಜ್ಯ ರಾಜಕಾರಣದ ದಿಕ್ಕು ಬದಲಾಗಬೇಕಿದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
‘ನೀವು ಕೊಂಚ ಸಾಮಾಜಿಕ ಜಾಲತಾಣ ಬದಿಗಿರಿಸಿ ತಳಮಟ್ಟದಲ್ಲಿ ಪ್ರಜಾಕೀಯದ ವಿಚಾರಗಳನ್ನು ತಲುಪಿಸುವಲ್ಲಿ ಗಮನಹರಿಸಿದರೆ ಸೂಕ್ತ. ಏಕೆಂದರೆ ಭಾರತ ಹಳ್ಳಿಗಳ ದೇಶ. ಹಳ್ಳಿ ಹಳ್ಳಿಗಳಲ್ಲಿ ಪ್ರಜಾಕೀಯದ ವಿಚಾರಧಾರೆ ಹರಿಯಬೇಕಾದರೆ, ನೀವೇ ಸ್ವತಃ ರಾಜ್ಯದ ಹಳ್ಳಿ ಹಳ್ಳಿಗೂ ಪ್ರವಾಸ ಕೈಗೊಂಡು ವಿಚಾರವನ್ನು ಮುಟ್ಟಿಸಬೇಕು. ಕೇವಲ ಸಾಮಾಜಿಕ ಜಾಲತಾಣ ಯುವಕರಿಗಷ್ಟೇ ಸೀಮಿತವಾಗಿದೆ’ ಎಂದು ಒಬ್ಬರು ಸಲಹೆ ನೀಡಿದ್ದಾರೆ. ಉಪೇಂದ್ರ ಅವರೇ ನಮ್ಮ ಸಿಎಂ ಆಗಬೇಕು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಉಪೇಂದ್ರ ಹಂಚಿಕೊಂಡಿರುವ ಪೋಸ್ಟ್.
ಇದನ್ನೂ ಓದಿ:
ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಿದ ಸಾಧುಕೋಕಿಲ, ಸರೋಜಾದೇವಿ ಮುಂತಾದ ಸೆಲೆಬ್ರಿಟಿಗಳು
ರೈತರ ಸಹಾಯಕ್ಕೆ ನಿಂತ ಉಪೇಂದ್ರ; ಬೆಳೆ ಖರೀದಿಸಿ, ಸಂಕಷ್ಟದಲ್ಲಿ ಇರುವವರಿಗೆ ಹಂಚಿದ ನಟ