AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಸಹಾಯಕ್ಕೆ ನಿಂತ ಉಪೇಂದ್ರ; ಬೆಳೆ ಖರೀದಿಸಿ, ಸಂಕಷ್ಟದಲ್ಲಿ ಇರುವವರಿಗೆ ಹಂಚಿದ ನಟ

ಬೆಳೆದ ಬೆಳೆ ವ್ಯಾಪಾರವಾಗದೇ ನಾಶವಾಗುತ್ತಿದ್ದರೆ ನಾವು ಕೊಂಡು ಅದನ್ನು ಸಂಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಹಂಚುತ್ತಿದ್ದೇವೆ. ಇದು ವ್ಯಾಪಾರ ಎಂದು ದಯವಿಟ್ಟು ತಿಳಿಯಬೇಡಿ. ಅಂತಹ ಸಂಕಷ್ಟದಲ್ಲಿರುವ ರೈತರು ಮಾತ್ರ ಸಂಪರ್ಕಿಸಿ ಎಂದು ಉಪೇಂದ್ರ ಕೋರಿದ್ದರು.

ರೈತರ ಸಹಾಯಕ್ಕೆ ನಿಂತ ಉಪೇಂದ್ರ; ಬೆಳೆ ಖರೀದಿಸಿ, ಸಂಕಷ್ಟದಲ್ಲಿ ಇರುವವರಿಗೆ ಹಂಚಿದ ನಟ
ಉಪೇಂದ್ರ ಅವರಿಗೆ ಈರುಳ್ಳಿ ಮಾರಿದ ರೈತರು
ರಾಜೇಶ್ ದುಗ್ಗುಮನೆ
| Edited By: |

Updated on: May 17, 2021 | 4:02 PM

Share

ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ತೊಂದರೆ ಆಗಿದೆ. ಈ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ಮುಂದೆ ಬಂದು ಸಹಾಯ ಮಾಡುತ್ತಿದ್ದಾರೆ. ನಟ ಉಪೇಂದ್ರ ಕೂಡ ಕಷ್ಟದಲ್ಲಿರುವವರ ಸಹಾಯಕ್ಕೆ ಮಿಡಿಯುತ್ತಿದ್ದಾರೆ. ಈಗ ಅವರು ರೈತರು ಬೆಳೆದ ಬೆಳೆಯನ್ನು ಖರೀದಿಸಿ ಅದನ್ನು ಸಂಕಷ್ಟದಲ್ಲಿರುವವರಿಗೆ ಹಂಚುವ ಮೂಲಕ ಮಾದರಿ ಆಗಿದ್ದಾರೆ.

ಲಾಕ್​ಡೌನ್​ನಿಂದಾಗಿ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಶೂಟಿಂಗ್​ ಸಂಪೂರ್ಣ ನಿಂತುಹೋಗಿವೆ. ಹಾಗಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಬಡ ಕಲಾವಿದರು ಬದುಕು ನಡೆಸುವುದು ಕಷ್ಟ ಆಗಿದೆ. ಅಂಥವರ ಸಹಾಯಕ್ಕೆ ನಟ ಉಪೇಂದ್ರ ಧಾವಿಸಿದ್ದಾರೆ. ಸಿನಿಮಾ ಚಟುವಟಿಕೆಗಳು ಸ್ಥಗಿತ ಆಗಿರುವುದರಿಂದ ಕೆಲಸ ಇಲ್ಲದೆ ಸಂಸಾರ ಸಾಗಿಸಲು ಕಷ್ಟಪಡುತ್ತಿರುವ ನೂರಾರು ಸಿನಿಮಾ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಸಾವಿರಾರು ಕುಟುಂಬಗಳಿಗೆ ಉಪೇಂದ್ರ ಉಚಿತ ರೇಷನ್​ ಕಿಟ್​ಗಳನ್ನು ಹಂಚುವುದಾಗಿ ತಿಳಿಸಿದ್ದರು. ಈಗ ರೈತರ ಸಹಾಯಕ್ಕೂ ಅವರು ಮುಂದಾಗಿದ್ದಾರೆ.

‘ಬೆಳೆದ ಬೆಳೆ ವ್ಯಾಪಾರವಾಗದೇ ನಾಶವಾಗುತ್ತಿದ್ದರೆ ನಾವು ಕೊಂಡು ಅದನ್ನು ಸಂಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಹಂಚುತ್ತಿದ್ದೇವೆ. ಇದು ವ್ಯಾಪಾರ ಎಂದು ದಯವಿಟ್ಟು ತಿಳಿಯಬೇಡಿ. ಅಂತಹ ಸಂಕಷ್ಟದಲ್ಲಿರುವ ರೈತರು ಮಾತ್ರ ಸಂಪರ್ಕಿಸಿ’ ಎಂದು ಉಪೇಂದ್ರ ಕೋರಿದ್ದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಟ್ರೆಹಳ್ಳಿ ಗ್ರಾಮದ ರೈತ ಮಹೇಶ್​ ಈರುಳ್ಳಿ ಬೆಳೆದಿದ್ದರು. ಆದರೆ, ಲಾಕ್​ಡೌನ್​ನಿಂದಾಗಿ ಈರುಳ್ಳಿ ಮಾರಾಟ ಮಾಡುವುದು ಕಷ್ಟವಾಗಿತ್ತು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಪೋಸ್ಟ್ ನೋಡಿ ಅವರನ್ನು ಮಹೇಶ್ ಸಂಪರ್ಕಿಸಿದ್ದಾರೆ. ಅವರು ಬೆಳೆದ 60 ಚೀಲ ಈರುಳ್ಳಿಯನ್ನು ನಟ ಉಪೇಂದ್ರ ಖರೀದಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರದ ರೈತ ಶಿವಕುಮಾರ್ ಕೂಡ ಉಪೇಂದ್ರ ಅವರಿಗೆ ಟೊಮೇಟೋ ಮಾರಿದ್ದಾರೆ. ‘ಒಂದು ರುಪಾಯಿ ಲಾಭವೂ ಪಡೆಯಲು ನಿರಾಕರಿಸಿ ಬರೀ ಅಸಲು ಮತ್ತು ಸಾಗಾಣಿಕೆ ವೆಚ್ಚ 10 ಸಾವಿರ ರೂ ಪಡೆದು ಸಂಕಷ್ಟದಲ್ಲಿರುವ ಜನರಿಗೆ ತಾವೇ ಹಂಚಿದ್ದಾರೆ ’ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

‘ಮಂಜುನಾಥ್ ಬಿ. ಸಿ. 3,640 kg ಸಿಹಿ ಕುಂಬಳಕಾಯಿ 23,000 ರೂ ಗೆ ನೀಡಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ಚಾಚಿದ್ದಾರೆ ಧನ್ಯವಾದಗಳು’ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

ಇದನ್ನೂ ಒದಿ: ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಿದ ಸಾಧುಕೋಕಿಲ, ಸರೋಜಾದೇವಿ ಮುಂತಾದ ಸೆಲೆಬ್ರಿಟಿಗಳು