‘ಕಿರಿಕ್​ ಪಾರ್ಟಿ ಹಿಂದಿ ರಿಮೇಕ್​ನಲ್ಲಿ ನಾನು ನಟಿಸಲ್ಲ’; ರಶ್ಮಿಕಾ ಖಡಕ್​ ನಿರ್ಧಾರಕ್ಕಿದೆ ಬಲವಾದ ಕಾರಣ

Rashmika Mandanna: ಒಂದು ವೇಳೆ ಹಿಂದಿಯಲ್ಲಿ ಕಿರಿಕ್​ ಪಾರ್ಟಿ​ ರಿಮೇಕ್​ ಸೆಟ್ಟೇರಿದರೆ ಅದರಲ್ಲಿ ನೀವು ನಾಯಕಿಯಾಗಿ ನಟಿಸುತ್ತೀರಾ ಎಂಬ ಪ್ರಶ್ನೆ ರಶ್ಮಿಕಾ ಅವರಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಎದುರಾಗಿದೆ. ಅದಕ್ಕೆ ಅವರು ಖಡಕ್​ ಆಗಿ ಉತ್ತರ ನೀಡಿದ್ದಾರೆ.

‘ಕಿರಿಕ್​ ಪಾರ್ಟಿ ಹಿಂದಿ ರಿಮೇಕ್​ನಲ್ಲಿ ನಾನು ನಟಿಸಲ್ಲ’; ರಶ್ಮಿಕಾ ಖಡಕ್​ ನಿರ್ಧಾರಕ್ಕಿದೆ ಬಲವಾದ ಕಾರಣ
ಕಿರಿಕ್ ಪಾರ್ಟಿ - ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟ ಸಿನಿಮಾ ಕಿರಿಕ್​ ಪಾರ್ಟಿ. ಅದರಲ್ಲಿ ಸಿಕ್ಕ ಗೆಲುವಿನ ಬಲದಿಂದಾಗಿ ಅವರು ಕನ್ನಡದ ಬೇರೆ ಸ್ಟಾರ್​ ನಟರ ಸಿನಿಮಾಗಳಿಗೆ ನಾಯಕಿ ಆಗುವಂತಾಯಿತು. ಆ ಮೇಲೆ ನೇರವಾಗಿ ಟಾಲಿವುಡ್​ಗೆ ಎಂಟ್ರಿ ಸಿಕ್ಕಿತು. ಈಗಂತೂ ಅವರು ಬಾಲಿವುಡ್​ನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ. ಆದರೆ ಕಿರಿಕ್​ ಪಾರ್ಟಿ ಸಿನಿಮಾದ ಹಿಂದಿ ರಿಮೇಕ್​ನಲ್ಲಿ ನಟಿಸಲು ಮಾತ್ರ ತಾವು ಯಾವುದೇ ಕಾರಣಕ್ಕೂ ಸಿದ್ಧರಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ. ಈ ಬಗ್ಗೆ ಸಿನಿಪ್ರಿಯರ ವಲಯದಲ್ಲಿ ಚರ್ಚೆ ಆಗುತ್ತಿದೆ.

ಕನ್ನಡದಲ್ಲಿ ಕಿರಿಕ್​ ಪಾರ್ಟಿ ಸಿನಿಮಾ 2016ರ ಡಿಸೆಂಬರ್​ನಲ್ಲಿ ತೆರೆಕಂಡು ಸೂಪರ್​ ಹಿಟ್​ ಆಯಿತು. ಕೂಡಲೇ ಅದರ ರಿಮೇಕ್​ ಹಕ್ಕುಗಳಿಗೆ ಬೇಡಿಕೆ ಬಂತು. ಬಾಲಿವುಡ್​ಗೂ ಆ ಚಿತ್ರ ರಿಮೇಕ್​ ಆಗಲಿದೆ ಎಂಬ ಮಾತುಗಳು ಕೇಳಿಬಂದವು. ಸ್ಟಾರ್​ ನಟ ಕಾರ್ತಿಕ್​ ಆರ್ಯನ್​ ಮತ್ತು ಜಾಕ್ವಲಿನ್​ ಫರ್ನಾಂಡಿಸ್​ ಅವರು ಜೋಡಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಆ ಸಿನಿಮಾ ಸೆಟ್ಟೇರಲೇ ಇಲ್ಲ.

ಈಗ ರಶ್ಮಿಕಾ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಒಂದು ವೇಳೆ ಕಿರಿಕ್​ ಪಾರ್ಟಿ​ ರಿಮೇಕ್​ ಸೆಟ್ಟೇರಿದರೆ ಅದರಲ್ಲಿ ನೀವು ನಾಯಕಿಯಾಗಿ ನಟಿಸುತ್ತೀರಾ ಎಂಬ ಪ್ರಶ್ನೆ ಅವರಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಎದುರಾಗಿದೆ. ಅದಕ್ಕೆ ಅವರು ಖಡಕ್​ ಆಗಿ ಉತ್ತರ ನೀಡಿದ್ದಾರೆ. ‘ಖಂಡಿತವಾಗಿಯೂ ನಟಿಸುವುದಿಲ್ಲ. ಒಮ್ಮೆ ಆ ಪಾತ್ರದಲ್ಲಿ ನಟಿಸಿ, ಅದರ ಭಾವನೆಗಳನ್ನು ಫೀಲ್​ ಮಾಡಿಕೊಂಡಿದ್ದೇನೆ. ಮತ್ತೆ ಅದನ್ನೇ ಮಾಡಿದರೆ ಹೊಸತನ ನೀಡಲು ನನ್ನಲ್ಲಿ ಏನೂ ಇಲ್ಲ. ಹೊಸ ಕಥೆಗಳ ಮೂಲಕ ಹೊಸ ಅನುಭವವನ್ನು ಪಡೆಯುವ ಅವಕಾಶ ನನ್ನೆದುರು ಇರುವಾಗ ಮತ್ತೆ ನಾನೇಕೆ ಹಳೇ ಅನುಭವಕ್ಕೆ ಗಂಟುಬೀಳಲಿ?’ ಎಂದಿದ್ದಾರೆ ರಶ್ಮಿಕಾ.

‘ಈಗ ನಾನು ಹೊಸ ಕಥೆಗಳನ್ನು ಹೇಳಬೇಕು. ಕಿರಿಕ್​ ಪಾರ್ಟಿ ಮಾತ್ರವಲ್ಲದೆ, ನನ್ನದೇ ಬೇರೆ ಯಾವ ಸಿನಿಮಾಗಳ ರಿಮೇಕ್​ನಲ್ಲಿಯೂ ನಾನು ನಟಿಸುವುದಿಲ್ಲ’ ಎಂದು ರಶ್ಮಿಕಾ ಹೇಳಿದ್ದಾರೆ. ಸದ್ಯ ಅವರು ಕೈಯಲ್ಲಿ ಹಲವು ಸಿನಿಮಾಗಳಿವೆ. ಅಲ್ಲು ಅರ್ಜುನ್​ ಜೊತೆ ನಟಿಸಿರುವ ಪುಷ್ಪ ಸಿನಿಮಾ ಎರಡು ಪಾರ್ಟ್​ಗಳಲ್ಲಿ ಮೂಡಿಬರಲಿದೆ. ಮೊದಲನೇ ಪಾರ್ಟ್​ಗೆ ಪುಷ್ಪ ಎಂಬ ಹೆಸರೇ ಇರಲಿದ್ದು, ಎರಡನೇ ಪಾರ್ಟ್​ಗೆ ಶೀರ್ಷಿಕೆ ಬದಲಾಯಿಸಲು ನಿರ್ದೇಶಕರು ಪ್ಲ್ಯಾನ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಇದನ್ನೂ ಓದಿ:

ತಮಿಳು ಹುಡುಗನನ್ನು ಮದುವೆ ಆಗ್ತಾರಾ ರಶ್ಮಿಕಾ ಮಂದಣ್ಣ? ಹರಿದಾಡುತ್ತಿದೆ ಹೊಸ ಗಾಸಿಪ್​

Rashmika Mandanna: ವಿಜಯ್​ ದೇವರಕೊಂಡ ಅಲ್ಲ; ಉಂಗುರ ತೋರಿಸಿ ಬಾಯ್​ಫ್ರೆಂಡ್​ ಯಾರು ಅಂತ ಹೇಳಿದ ರಶ್ಮಿಕಾ