Kuri Prathap: ನಾನು ಆರಾಮಾಗಿದ್ದೇನೆ, ಸಾವಿನ ಬಗ್ಗೆ ಅದ್ಯಾಕೆ ಸುಳ್ಳು ಸುದ್ದಿ ಹರಡಿಸುತ್ತಾರೋ ಗೊತ್ತಿಲ್ಲ – ಕುರಿ ಪ್ರತಾಪ್
Kuri Prathap Death Hoax: ಚೆನ್ನಾಗಿರುವವರ ಬಗ್ಗೆ ಇಂತಹ ಸುಳ್ಳು ಸುದ್ದಿ ಏಕೆ ಹರಡಿಸುತ್ತಾರೋ ಗೊತ್ತಾಗಲ್ಲ. ಎಲ್ಲರೂ ಮನೆಯಲ್ಲಿದ್ದು, ಆರಾಮಾಗಿರಿ. ಹೊರಗಡೆ ಹೋಗಬೇಡಿ ಎಂದು ಕುರಿ ಪ್ರತಾಪ್ ಮನವಿ ಮಾಡಿದ್ದಾರೆ.
ಬೆಂಗಳೂರು: ಕೊರೊನಾ ಬಂದ ಮೇಲೆ ಸಾವಿನ ಸುದ್ದಿಯನ್ನು ಕೇಳುವುದು ಮಾಮೂಲಾದಂತೆ ಆಗಿದೆ. ಯಾರಿಗೆ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಂತಹ ಸಂದರ್ಭದಲ್ಲಿ ಎಷ್ಟೋ ಜನ ಸಾಮಾಜಿಕ ಜಾಲತಾಣಗಳ ಮೂಲಕ ಅಂತೆಕಂತೆಗಳ ಸುದ್ದಿಯನ್ನು ಹರಿಬಿಟ್ಟು ಅದನ್ನೇ ನಿಜವೆಂದು ನಂಬಿಸಿ ಬಿಡುತ್ತಾರೆ. ಊಹಾಪೋಹದ ಸುದ್ದಿಗಳನ್ನೂ ಸತ್ಯವೆಂದು ಭಾವಿಸುವ ಜನ ಸಿಕ್ಕಲ್ಲೆಲ್ಲಾ ಅದನ್ನು ಹಂಚಿಕೊಳ್ಳುವ ಕಾರಣ ವಿನಾಕಾರಣ ಆತಂಕ ಸೃಷ್ಟಿಯಾಗುತ್ತದೆ. ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಕುರಿಪ್ರತಾಪ್ ಅವರ ವಿಷಯದಲ್ಲೂ ಇಂತಹದ್ದೇ ಒಂದು ಯಡವಟ್ಟಾಗಿದೆ. ಕುರಿ ಪ್ರತಾಪ್ ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ ಕಾರಣ ಪರಿಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಅಷ್ಟೇ ಅಲ್ಲದೇ, ಕೆಲವೆಡೆ ಕುರಿ ಪ್ರತಾಪ್ ಇನ್ನಿಲ್ಲ ಎಂಬ ಮಾಹಿತಿಯನ್ನೂ ಹರಿಬಿಡಲಾಗಿತ್ತು.
ತಮ್ಮ ನೆಚ್ಚಿನ ನಟನಿಗೆ ಆರೋಗ್ಯ ಹದಗೆಟ್ಟಿದೆ ಎಂದಾಗಲೇ ಆತಂಕಗೊಂಡಿದ್ದ ಅಭಿಮಾನಿಗಳು ನಿಧನ ಸುದ್ದಿಯನ್ನು ನೋಡಿ ಅಕ್ಷರಶಃ ಕಂಗಾಲಾಗಿದ್ದಾರೆ. ಕುರಿಪ್ರತಾಪ್ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು ಎಂದು ದಿಗಿಲುಗೊಂಡಿದ್ದಾರೆ. ಆದರೆ, ಇದೊಂದು ಸುಳ್ಳು ವದಂತಿಯಾಗಿದ್ದು, ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಿಬಿಡಲಾಗಿದೆ ಎಂದು ಸ್ವತಃ ಕುರಿ ಪ್ರತಾಪ್ ಸ್ಪಷ್ಟನೆ ನೀಡಿದ ಬಳಿಕ ಅಭಿಮಾನಿಗಳಿಗೆ ಸಮಾಧಾನವಾಗಿದೆ.
ಸಾವಿನ ಸುದ್ದಿ ಬಗ್ಗೆ ಸ್ವತಃ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಕುರಿ ಪ್ರತಾಪ್, ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದೆ. ಅನೇಕರು ಫೋನ್ ಮಾಡಿ ಮೇಲಿಂದ ಮೇಲೆ ವಿಚಾರಿಸುತ್ತಿದ್ದಾರೆ. ಎಲ್ಲರಿಗೂ ಹೇಳಿ ಹೇಳಿ ಸಾಕಾಯಿತು. ನಾನು ಆರಾಮಾಗಿದ್ದೇನೆ, ಮನೆಯಲ್ಲೇ ಇದ್ದೇನೆ ಎಂದು ವಿಡಿಯೋ ಮೂಲಕ ಸ್ಪಷ್ಟೀಕರಿಸಿದ್ದಾರೆ. ಜತೆಗೆ, ಚೆನ್ನಾಗಿರುವವರ ಬಗ್ಗೆ ಇಂತಹ ಸುಳ್ಳು ಸುದ್ದಿ ಏಕೆ ಹರಡಿಸುತ್ತಾರೋ ಗೊತ್ತಾಗಲ್ಲ. ಎಲ್ಲರೂ ಮನೆಯಲ್ಲಿದ್ದು, ಆರಾಮಾಗಿರಿ. ಹೊರಗಡೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹಿರಿಯ ನಟ ದೊಡ್ಡಣ್ಣ ಅವರ ಬಗ್ಗೆಯೂ ಇಂತಹದ್ದೇ ಸುಳ್ಳು ಸುದ್ದಿ ಹರಿದಾಡಿ ಅಭಿಮಾನಿ ಬಳಗದಲ್ಲಿ ಆತಂಕ ಸೃಷ್ಟಿಸಲು ಕಾರಣವಾಗಿತ್ತು. ವದಂತಿ ಹರಡಿದ ನಂತರ ದೊಡ್ಡಣ್ಣ ಅವರೇ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದರು. ಅಲ್ಲದೇ ಸುಳ್ಳು ಸುಳ್ಳೇ ಸಾವಿನ ಸುದ್ದಿ ಹಬ್ಬಿಸುವವರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ಕುರಿಪ್ರತಾಪ್ ವಿಷಯದಲ್ಲೂ ಹಾಗೆಯೇ ಆಗಿದೆ.
ಇದನ್ನೂ ಓದಿ: ನಾನು ಜೀವಂತವಾಗಿದ್ದೇನೆ. ಯಾರೋ ಸಾಮಾಜಿಕ ಜಾಲತಾಣದಲ್ಲಿ ನನ್ನ ಪೋಟೋ ಹಾಕಿ RIP ಹಾಕಿದ್ದಾರೆ : ಹಿರಿಯ ನಟ ದೊಡ್ಡಣ್ಣ