ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ನೀಡಿ ಕೊವಿಡ್ ಸೋಂಕಿತರಿಗೆ ನೆರವಾದ ಜೆಕೆ ನಟನೆಯ ಐರಾವನ್ ಚಿತ್ರತಂಡ
ಐರಾವನ್ ಚಿತ್ರತಂಡದವರು ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ವಾಹನವನ್ನು ಬ್ಯಾಟರಾಯನಪುರ ವ್ಯಾಪ್ತಿಗೆ ನೀಡಿದ್ದಾರೆ. 10 ಸಾವಿರ ಕೊವಿಡ್ ಮೆಡಿಕಲ್ ಕಿಟ್ ಹಾಗೂ ಔಷಧಿಗಳನ್ನು ನೀಡುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.
ದೇಶದೆಲ್ಲೆಡೆ ಕೊರೊನಾ ವೈರಸ್ ತಾಂಡವ ಆಡುತ್ತಿದೆ. ಕೊವಿಡ್ ಎರಡನೇ ಅಲೆಗೆ ಜನರು ತತ್ತರಿಸಿದ್ದಾರೆ. ಸರಿಯಾದ ಸಮಯಕ್ಕೆ ಬೆಡ್ ಮತ್ತು ಆಕ್ಸಿಜನ್ ಸಿಗದೇ ಹಲವರು ಅಸುನೀಗುವಂತಾಗಿದೆ. ಈ ವೇಳೆ ಆ್ಯಂಬುಲೆನ್ಸ್ಗಾಗಿಯೂ ರೋಗಿಗಳು ಪರಿದಾಡುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದು ಕನ್ನಡದ ಐರಾವನ್ ಚಿತ್ರತಂಡ ಮುಂದೆ ಬಂದಿದೆ. ಈ ಸಿನಿಮಾದಲ್ಲಿ ಖ್ಯಾತ ನಟ ಜೆಕೆ, ವಿವೇಕ್, ಅದ್ವಿತಿ ಶೆಟ್ಟಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರತಂಡದಿಂದ ಈಗ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದೆ.
ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಐರಾವನ್ ಚಿತ್ರತಂಡವು ಕೊವಿಡ್ ಸೋಂಕಿತರ ಸೇವೆಗೆ ಇಳಿದಿದೆ. ಚಿತ್ರತಂಡದ ಜೊತೆ ಸೇರಿ ನಿರ್ಮಾಪಕ ನಿರಂತರ ಗಣೇಶ್ ಅವರು ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ವಾಹನವನ್ನು ಬ್ಯಾಟರಾಯನಪುರ ವ್ಯಾಪ್ತಿಗೆ ನೀಡಿದ್ದಾರೆ. 10 ಸಾವಿರ ಕೊವಿಡ್ ಮೆಡಿಕಲ್ ಕಿಟ್ ಹಾಗೂ ಔಷಧಿಗಳನ್ನು ನೀಡುವ ಮೂಲಕ ಇತರರಿಗೂ ಮಾದರಿ ಆಗಿದೆ ಐರಾವನ್ ಸಿನಿಮಾ ತಂಡ.
‘ಈ ಕೊವಿಡ್ ಕಷ್ಟದಲ್ಲಿ ಇಂಥ ಸಹಾಯ ಮಾಡುವುದು ನಮ್ಮ ಜವಾಬ್ದಾರಿ. ಎಲ್ಲೆಡೆ ಆ್ಯಂಬುಲೆನ್ಸ್ ಕೊರತೆ ಎದುರಾಗಿದೆ. ಅದನ್ನು ಗಮನಿಸಿ ನಾವು ಬ್ಯಾಟರಾಯನಪುರ ವ್ಯಾಪ್ತಿಗೆ ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್ ನೀಡಿದ್ದೇನೆ. ಇದರ ಜೊತೆಗೆ ಕೊವಿಡ್ ಮೆಡಿಕಲ್ ಕಿಟ್ ಕೂಡ ನೀಡಿದ್ದೇನೆ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಈ ಔಷಧಿಗಳನ್ನು ತೆಗೆದುಕೊಳ್ಳಬಹುದು. ಹೇಗೆ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನೂ ಅದರೊಂದಿಗೆ ನೀಡಿದ್ದೇವೆ’ ಎಂದು ನಿರ್ಮಾಪಕ ನಿರಂತರ ಗಣೇಶ್ ಹೇಳಿದ್ದಾರೆ.
View this post on Instagram
ಇದೇ ರೀತಿ ಚಿತ್ರರಂಗದ ಅನೇಕರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ನಟ ಉಪೇಂದ್ರ ಅವರ ನೇತೃತ್ವದಲ್ಲಿ ಸಾವಿರಾರು ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ನಟ ಅರ್ಜುನ್ ಗೌಡ ಅವರು ಆ್ಯಂಬುಲೆನ್ಸ್ ಚಾಲಕನಾಗಿ ಹಗಲು-ಇರುಳು ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿದೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೊತೆಯಾಗಿ ಕಷ್ಟದಲ್ಲಿರುವ ಅನೇಕರಿಗೆ ನೆರವಾಗುತ್ತಿದ್ದಾರೆ. ಹಿರಿಯ ಕಲಾವಿದರಿಗೆ ಸಹಾಯ ಮಾಡುತ್ತಿದ್ದಾರೆ. ನಟ ಶ್ರೀಮುರಳಿ ಅವರು 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದ ನಟಿ ಶುಭಾ ಪೂಂಜಾ ಅವರು ಫುಡ್ಕಿಟ್ ವಿತರಿಸಿದ್ದಾರೆ.
ಇದನ್ನೂ ಓದಿ:
ಭುವನ್ ಪೊನ್ನಣ್ಣ ನಿಜವಾದ ಬಿಗ್ ಬಾಸ್; ಕೊವಿಡ್ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ
ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಿದ ಸಾಧುಕೋಕಿಲ, ಸರೋಜಾದೇವಿ ಮುಂತಾದ ಸೆಲೆಬ್ರಿಟಿಗಳು