SPB Birth Anniversary: ಮೂಲತಃ ತೆಲುಗಿನವರಾದರೂ ಎಸ್​ಪಿಬಿಗೆ ಕರ್ನಾಟಕದ ಮೇಲಿತ್ತು ಬೆಟ್ಟದಷ್ಟು ಪ್ರೀತಿ; ಕಾರಣ ಏನು?

ಮದನ್​ ಕುಮಾರ್​

|

Updated on: Jun 04, 2021 | 8:31 AM

Happy Birthday SP Balasubrahmanyam: ಮುಂದಿನ ಜನ್ಮ ಇದ್ದರೆ ನಾನು ಕರ್ನಾಟಕದಲ್ಲಿಯೇ ಜನಿಸಲು ಇಷ್ಟಪಡುತ್ತೇನೆ ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದರು. ಅವರಿಗೆ ಕರುನಾಡಿನ ಮೇಲೆ ಎಷ್ಟು ಅಭಿಮಾನ ಇತ್ತು ಎಂಬುದಕ್ಕೆ ಈ ಮಾತು ಸಾಕ್ಷಿ.

SPB Birth Anniversary: ಮೂಲತಃ ತೆಲುಗಿನವರಾದರೂ ಎಸ್​ಪಿಬಿಗೆ ಕರ್ನಾಟಕದ ಮೇಲಿತ್ತು ಬೆಟ್ಟದಷ್ಟು ಪ್ರೀತಿ; ಕಾರಣ ಏನು?
ಎಸ್​.ಪಿ. ಬಾಲಸುಬ್ರಹ್ಮಣ್ಯಂ

Follow us on

ಸಂಗೀತ ಲೋಕದಲ್ಲಿ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಾಟಿ ಆಗುವಂತಹ ಇನ್ನೊಬ್ಬ ಗಾಯಕ ಇರಲು ಸಾಧ್ಯವೇ ಇಲ್ಲ. ಅಷ್ಟು ದೊಡ್ಡ ಸಾಧನೆ ಈ ಮಹಾನ್​ ಗಾಯಕನದ್ದು. ‘ಈ ಭೂಮಿ ತಿರುಗುವವರೆಗೂ ಪ್ರತಿ ದಿನ ಒಂದಲ್ಲಾ ಒಂದು ಕಡೆ ಎಸ್​ಪಿಬಿ ಅವರ ಧ್ವನಿ ಕೇಳಿಸುತ್ತಲೇ ಇರುತ್ತದೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಹಂಸಲೇಖ. ಅಂದರೆ, ಕಂಠದ ಮೂಲಕ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರು ಸದಾ ಜೀವಂತವಾಗಿರುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇಂದು (ಜೂ.4) ಎಸ್​ಪಿಬಿ ಅವರ 75ನೇ ವರ್ಷದ ಜನ್ಮದಿನ. ಆ ಪ್ರಯುಕ್ತ ಅಭಿಮಾನಿಗಳೆಲ್ಲರೂ ತಮ್ಮ ನೆಚ್ಚಿನ ಗಾಯಕನ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.

1946ರಲ್ಲಿ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಎಸ್​ಪಿಬಿ ಜನಿಸಿದರು. ಅವರ ಮಾತೃಭಾಷೆ ತೆಲುಗು. ಆದರೆ ಎಂದಿಗೂ ಅವರು ಒಂದು ಭಾಷೆಗೆ ಸೀಮಿತವಾದ ವ್ಯಕ್ತಿ ಆಗಿರಲಿಲ್ಲ. ಬರೋಬ್ಬರಿ 16 ಭಾಷೆಗಳಲ್ಲಿ ನಿರರ್ಗಳವಾಗಿ ಹಾಡುವ ಮೂಲಕ ಅವರು ಎಲ್ಲ ಭಾಷೆಯ ಜನರಿಗೂ ಹತ್ತಿರವಾದರು. ಕನ್ನಡದಲ್ಲಿಯೂ ಕೂಡ ಸಾವಿರಾರು ಗೀತೆಗಳನ್ನು ಹಾಡಿದರು. ತೆಲುಗು ಮಾತೃಭಾಷೆ ಆಗಿದ್ದರೂ, ತಾವು 16 ಭಾಷೆಗಳಲ್ಲಿ ಹಾಡಿದ್ದರೂ ಕೂಡ ಎಸ್​ಪಿಬಿಗೆ ಕನ್ನಡದ ಮೇಲೆ ಅಪಾರ ಪ್ರೀತಿ. ಕರ್ನಾಟಕ ಎಂದರೆ ಪಂಚಪ್ರಾಣವಾಗಿತ್ತು. ಅದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದರು.

ಅಷ್ಟಕ್ಕೂ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕರ್ನಾಟಕ ಮತ್ತು ಕರ್ನಾಟಕದ ಜನರ ಮೇಲೆ ಯಾಕೆ ಎಷ್ಟು ಅಭಿಮಾನ? ಉತ್ತರ ಸಿಂಪಲ್​; ಕನ್ನಡಿಗರು ತೋರಿದ ಪ್ರೀತಿ. ಹೌದು, ಸ್ವತಃ ಎಸ್​ಪಿಬಿ ಅವರೇ ಹೇಳಿಕೊಂಡಂತೆ ಅವರಿಗೆ ಕರ್ನಾಟಕದಲ್ಲಿ ಸಿಕ್ಕಷ್ಟು ಪ್ರೀತಿ-ಅಭಿಮಾನ ಬೇರೆಲ್ಲಿಯೂ ಸಿಕ್ಕಿಲ್ಲ. ಹಲವು ಭಾಷೆಗಳಲ್ಲಿ ಹಾಡಿದ್ದರೂ, ಹೋದಲ್ಲೆಲ್ಲಾ ಅಭಿಮಾನಿ ಬಳಗ ಸೃಷ್ಟಿ ಆಗಿದ್ದರೂ ಕೂಡ ಅವರಿಗೆ ಕರ್ನಾಟಕದ ಅಭಿಮಾನಿಗಳಿಂದ ಸಿಗುತ್ತಿದ್ದ ಪ್ರೀತಿ ವಿಶೇಷ. ಹಾಗಾಗಿ ಮುಂದಿನ ಜನ್ಮ ಇದ್ದರೆ ನಾನು ಕರ್ನಾಟಕದಲ್ಲಿಯೇ ಜನಿಸಲು ಇಷ್ಟಪಡುತ್ತೇನೆ ಎಂದು ಅವರು ಹಲವು ಭಾರಿ ಹೇಳಿಕೊಂಡಿದ್ದರು. ಅವರಿಗೆ ಕರ್ನಾಟಕದ ಮೇಲೆ ಎಷ್ಟು ಅಭಿಮಾನ ಇತ್ತು ಎಂಬುದಕ್ಕೆ ಈ ಮಾತು ಸಾಕ್ಷಿ.

2020ರ ಸೆ.25ರಂದು ಅನಾರೋಗ್ಯಕ್ಕೆ ತುತ್ತಾಗಿ ಎಸ್​ಪಿಬಿ ಅವರು ಇಹಲೋಕ ತ್ಯಜಿಸಿದರು. ಆಗ ಅವರಿಗೆ 74 ವರ್ಷ ವಯಸ್ಸಾಗಿತ್ತು. ಹಲವು ದಿನಗಳ ಕಾಲ ಆರೋಗ್ಯ ಸಮಸ್ಯೆಯಿಂದ ಬಳಲಿದ ಅವರು 52 ದಿನ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರು ಗುಣಮುಖರಾಗಿ ಬರಲಿ ಎಂದು ಕೋಟ್ಯಂತರ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದರು. ಅಂತಿಮವಾಗಿ ಯಾರ ಪ್ರಾರ್ಥನೆಯೂ ಫಲಿಸಲಿಲ್ಲ. ಭೌತಿಕವಾಗಿ ಅವರು ನಮ್ಮನ್ನೆಲ್ಲ ಅಗಲಿದ್ದರೂ ಕೂಡ ಹಾಡುಗಳ ರೂಪದಲ್ಲಿ ನಮ್ಮೊಡನೆ ಉಸಿರಾಡುತ್ತಿದ್ದಾರೆ. ಆ ಮಹಾನ್​ ಗಾಯಕ, ತಮ್ಮದೇ ಆಸೆಯಂತೆ ಕರುನಾಡಿನಲ್ಲಿ ಹುಟ್ಟಿಬರಲಿ ಎಂದು ಬಯಸುತ್ತ ಅಭಿಮಾನಿಗಳೆಲ್ಲರೂ ಅವರು ಜನ್ಮದಿನ ಆಚರಿಸುತ್ತಿದ್ದಾರೆ.

ಇದನ್ನೂ ಓದಿ:

ನಿಧನರಾಗುವುದಕ್ಕೂ ಮುನ್ನ ಎಸ್.​ಪಿ. ಬಾಲಸುಬ್ರಹ್ಮಣ್ಯಂ ಮಾಡಿದ್ದರು ದೇವರು ಮೆಚ್ಚುವ ಕೆಲಸ

SPB Birth Anniversary: 16 ಭಾಷೆ, 40 ಸಾವಿರ ಹಾಡು; ಜನ್ಮದಿನದಂದು ಮಹಾನ್​ ಸಾಧಕ ಎಸ್​ಪಿಬಿ ನೆನೆದ ಅಭಿಮಾನಿಗಳು

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada