ನಿಧನರಾಗುವುದಕ್ಕೂ ಮುನ್ನ ಎಸ್.​ಪಿ. ಬಾಲಸುಬ್ರಹ್ಮಣ್ಯಂ ಮಾಡಿದ್ದರು ದೇವರು ಮೆಚ್ಚುವ ಕೆಲಸ

ನಿಧನರಾಗುವುದಕ್ಕೂ ಮುನ್ನ ಎಸ್.​ಪಿ. ಬಾಲಸುಬ್ರಹ್ಮಣ್ಯಂ ಮಾಡಿದ್ದರು ದೇವರು ಮೆಚ್ಚುವ ಕೆಲಸ
ಎಸ್​ಪಿ ಬಾಲಸುಬ್ರಹ್ಮಣ್ಯಂ

SPB: 2020ರ ಮಾರ್ಚ್​ನಲ್ಲಿ ಆಗಷ್ಟೇ ಕೊರೊನಾ ಹಾವಳಿ ಹೆಚ್ಚಾಗಿತ್ತು. ಯುವಜನತೆ ಕೂಡ ಅಸಹಾಯಕರಾಗಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಆ ಕಷ್ಟಕಾಲದಲ್ಲಿ 74ರ ಹರೆಯದ ಎಸ್​ಪಿಬಿ ಸಮಾಜಸೇವೆಗೆ ಮುಂದಾಗಿದ್ದರು.

Madan Kumar

| Edited By: Rajesh Duggumane

Jun 03, 2021 | 7:35 PM

ಭಾರತೀಯ ಚಿತ್ರರಂಗ ಕಂಡ ಮಹಾನ್​ ಸಾಧಕ ಎಸ್.​ಪಿ. ಬಾಲಸುಬ್ರಹ್ಮಣ್ಯಂ ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಸಾವಿರಾರು ಸುಮಧುರ ಗೀತೆಗಳ ಮೂಲಕ ಅವರು ಸದಾ ನಮ್ಮೊಳಗೆ ಜೀವಂತವಾಗಿರುತ್ತಾರೆ. ಸಂಗೀತಪ್ರೇಮಿಗಳ ಪಾಲಿಗೆ ಎಸ್​ಪಿಬಿ ಹೆಸರು ಎಂದಿಗೂ ಅಮರ. ಜೂ.4 ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ. ಬದುಕಿದ್ದರೆ ಅವರು 75ನೇ ವಸಂತಕ್ಕೆ ಕಾಲಿಡುತ್ತಿದ್ದರು. ಕಳೆದ ವರ್ಷ ಅವರು ಅನಾರೋಗ್ಯಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದು ಅವರ ಅಭಿಮಾನಿಗಳಿಗೆ ಸಹಿಸಲಾರದಷ್ಟು ನೋವು ನೀಡಿತ್ತು. ಆರೋಗ್ಯ ಕೈಕೊಡುವುದಕ್ಕೂ ಕೆಲವೇ ದಿನಗಳ ಮುನ್ನ ಕೂಡ ಎಸ್​ಪಿಬಿ ಅವರು ಜನಪರ ಕಾರ್ಯದಲ್ಲಿ ನಿರತರಾಗಿದ್ದರು.

2020ರ ಮಾರ್ಚ್​ ತಿಂಗಳು. ಆಗಷ್ಟೇ ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿತ್ತು. ಎಲ್ಲೆಡೆ ಲಾಕ್​ಡೌನ್​ ಘೋಷಿಸಲಾಗಿತ್ತು. ಮಹಾಮಾರಿಗೆ ಅನೇಕ ಹೆಣಗಳು ಬೀಳತೊಡಗಿದವು. ಆ ಸಂದರ್ಭದಲ್ಲಿ ಮನೆಯಿಂದ ಹೊರಬಂದು ಯಾರು ಯಾರಿಗೂ ಸಹಾಯ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಕೊರೊನಾ ವಿರುದ್ಧ ಹೋರಾಡಲು ಹಣದ ಅವಶ್ಯಕತೆ ಕೂಡ ಇತ್ತು. ಯುವಜನತೆ ಕೂಡ ಅಸಹಾಯಕರಾಗಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಆ ಕಷ್ಟಕಾಲದಲ್ಲಿ 74ರ ಹರೆಯದ ಎಸ್​ಪಿಬಿ ಸಮಾಜಸೇವೆಗೆ ಮುಂದಾಗಿದ್ದರು.

ಹಾಡುಗಾರಿಕೆಯೇ ಎಸ್​ಪಿಬಿ ಅವರ ಶಕ್ತಿ. ಆದರೆ ವಯೋಸಹಜ ಅನಾರೋಗ್ಯ ಎದುರಾಗುತ್ತಿದ್ದರಿಂದ ಮೊದಲಿನಂತೆ ಸರಾಗವಾಗಿ ಹಾಡಲು ಅವರಿಗೆ ಕಷ್ಟ ಆಗುತ್ತಿತ್ತು. ಅಂಥ ಕಷ್ಟದಲ್ಲೂ ಕೂಡ ಅವರು ಗಾಯನದ ಮೂಲಕವೇ ನಿಧಿ ಸಂಗ್ರಹ ಮಾಡುವ ಕೆಲಸಕ್ಕೆ ಮುಂದಾದರು. ‘ಎಸ್​ಪಿಬಿ ಫ್ಯಾನ್ಸ್​ ಚಾರಿಟೇಬಲ್​ ಫೌಂಡೇಶನ್​’ ಮೂಲಕ ಸಾಧ್ಯವಾದಷ್ಟು ದೇಣಿಗೆ ಸಂಗ್ರಹಿಸಿ, ಅದನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಬಳಸಬೇಕು ಎಂದು ಅವರು ನಿರ್ಧರಿಸಿದರು.

ಅಭಿಮಾನಿಗಳ ಕೋರಿಕೆಯ ಮೇರೆಗೆ ಫೇಸ್​ಬುಕ್​ನಲ್ಲಿ ಲೈವ್​ ಬಂದು ಎಸ್​ಪಿಬಿ ಹಾಡಿದರು. ಯಾವ ಹಾಡು ಬೇಕು ಎಂದು ಕೋರಿಕೆ ಸಲ್ಲಿಸುವ ಅಭಿಮಾನಿಗಳು ತಮ್ಮ ಕೈಲಾದಷ್ಟು ಹಣವನ್ನು ‘ಎಸ್​ಪಿಬಿ ಫ್ಯಾನ್ಸ್​ ಚಾರಿಟೇಬಲ್​ ಫೌಂಡೇಶನ್​’ ಬ್ಯಾಂಕ್​ ಖಾತೆಗೆ ದೇಣಿಗೆಯಾಗಿ ನೀಡಿದರು. ಅಂಥ ಅಭಿಮಾನಿಗಳ ಹೆಸರನ್ನು ಲೈವ್​ನಲ್ಲಿ ಹೇಳಿ, ಧನ್ಯವಾದ ತಿಳಿಸಿದ ಬಳಿಕ ಎಸ್​ಪಿಬಿ ಹಾಡು ಹೇಳುತ್ತಿದ್ದರು.

ಯಾರು ಯಾವ ಹಾಡು ಬೇಕೆಂದು ಕೋರಿಕೆ ಸಲ್ಲಿಸುತ್ತಾರೆ ಎಂಬುದು ಮೊದಲೇ ಗೊತ್ತಾಗುತ್ತಿರಲಿಲ್ಲ. ಅದು ತಿಳಿದ ಬಳಿಕ ಆ ಹಾಡಿನ ಸಾಹಿತ್ಯವನ್ನು ಇನ್ನೊಮ್ಮೆ ನೋಡಿಕೊಳ್ಳಲು ಎಸ್​ಪಿಬಿಗೆ ಸಮಯ ಬೇಕಾಗುತ್ತಿತ್ತು. ಒಂದು ದಿನ ಸೂಕ್ತ ತಯಾರಿ ಮಾಡಿಕೊಂಡು ಮರುದಿನ ಲೈವ್​ ಬಂದು ಅವರು ಹಾಡುತ್ತಿದ್ದರು. ಇದಕ್ಕೆಲ್ಲ ತುಂಬ ಶ್ರಮ ಆಗುತ್ತಿತ್ತು. ಆದರೂ ಕೊರೊನಾ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಆಗಲಿ ಎಂಬ ಕಾರಣಕ್ಕೆ ಅವರು ಇಷ್ಟೆಲ್ಲ ಕಷ್ಟಪಡುತ್ತಿದ್ದರು.

ಎಸ್​ಪಿಬಿ ಅವರ ಈ ಕೆಲಸದಿಂದ ಲಕ್ಷಾಂತರ ರೂಪಾಯಿ ಸಂಗ್ರಹ ಆಯಿತು. ಅದನ್ನು ಅವರು ಚಾರಿಟಿಗೆ ಬಳಸಿದರು. ಆದರೆ ವಿಧಿ ಆಟ ಬೇರೆಯೇ ಇತ್ತು. ಕೊವಿಡ್​ ಸೋಂಕಿತರಿಗಾಗಿ ನಿಧಿ ಸಂಗ್ರಹ ಮಾಡಿದ ಎಸ್​ಪಿಬಿ ಅವರೇ ಸ್ವತಃ ಕೊರೊನಾ ಸೋಂಕಿಗೆ ಒಳಗಾದರು. ನಂತರ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. 52 ದಿನಗಳ ಕಾಲ ಚಿಕಿತ್ಸೆ ಪಡೆದ ಅವರು ಕೊನೆಗೂ ಮರಳಿ ಬರಲಿಲ್ಲ. ಆದರೂ ತಮ್ಮ ಕೊನೇ ದಿನಗಳಲ್ಲೂ ಅವರು ಹಾಡುಗಾರಿಕೆಯ ಮೂಲಕ ನಿಧಿ ಸಂಗ್ರಹಿಸಿ ದೇವರು ಮೆಚ್ಚುವ ಕೆಲಸ ಮಾಡಿದ್ದರು.

ಇದನ್ನೂ ಓದಿ:

ಎಸ್​ಪಿಬಿ​ ಜನ್ಮದಿನದ ವಿಶೇಷ; ಸ್ಟಾರ್​ ಸಿಂಗರ್​ಗಳಿಂದ 12 ಗಂಟೆ ನಾನ್​ ಸ್ಟಾಪ್​ ಹಾಡು, ನೀವು ಕೇಳಬಹುದು

ಮಹಾನ್ ಗಾಯಕನ ಆರೋಗ್ಯಕ್ಕಾಗಿ ರಮಣೀಯ ಹಿನ್ನೆಲೆಯಲ್ಲಿ ಹಾಡು ಸಂಯೋಜಿಸಿದ ನಾದ ಬ್ರಹ್ಮ

Follow us on

Related Stories

Most Read Stories

Click on your DTH Provider to Add TV9 Kannada