2021ರಲ್ಲೂ ಚಿತ್ರರಂಗದ ಸೆಲೆಬ್ರಿಟಿಗಳ ಸಾವಿನ ಸರಣಿ ಮುಂದುವರಿದಿದೆ. ಒಬ್ಬರಾದ ಮೇಲೆ ಒಬ್ಬರ ನಿಧನದ ಸುದ್ದಿ ಕೇಳಿ ಬರುತ್ತಲೇ ಇದೆ. ಈಗ ಸ್ಯಾಂಡಲ್ವುಡ್ ಹಿರಿಯ ನಟಿ ಬಿ. ಜಯಾ ಮೃತರಾಗಿದ್ದಾರೆ. ಗುರುವಾರ (ಜೂನ್ 3) ಮಧ್ಯಾಹ್ನ 3:30 ಸುಮಾರಿಗೆ ಕೊನೆ ಉಸಿರೆಳೆದರು.
ಕೆಲ ದಿನದಿಂದ ಜಯಾ ಅವರಿಗೆ ವಯೋಸಹಜ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ ಜಯಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅವರನ್ನು ಚಿತ್ರರಂಗ ಕಳೆದುಕೊಂಡಿದ್ದು, ಅವರ ನಿಧನಕ್ಕೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.
ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಕೊವಿಡ್ಗೆ ಬಲಿಯಾದರು. ಬಾಲಿವುಡ್ ನಟ ರಾಹುಲ್ ವೋಹ್ರಾ, ತೆಲುಗು ನಟ ಟಿಎನ್ಆರ್, ತಮಿಳು ನಟ ಪಾಂಡು, ಕಾಲಿವುಡ್ ನಿರ್ದೇಶಕ ಕೆ.ವಿ. ಆನಂದ್, ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಯುವ ನಟ- ನಿರ್ಮಾಪಕ ಡಿ.ಎಸ್. ಮಂಜುನಾಥ್, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್, ಪೋಸ್ಟರ್ ಡಿಸೈನರ್ ಮಸ್ತಾನ್, ಪುಟ್ಟಣ್ಣ ಕಣಗಾಲ್ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಮುಂತಾದವರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ.
ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದರು. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಜಯಾ ಇತ್ತೀಚಿನ ದಿನಗಳಲ್ಲಿ ಕೆಲವು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. 1944ರಲ್ಲಿ ಜನಿಸಿದ್ದ ಜಯಾ 1958ರಲ್ಲಿ ಭಕ್ತ ಪ್ರಹ್ಲಾದ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು.
ಇದನ್ನೂ ಓದಿ: HS Doreswamy Passed Away: ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ನಿಧನ
ಖ್ಯಾತ ಕಾಲಿವುಡ್ ನಿರ್ದೇಶಕ ಜಿಎನ್ ರಂಗರಾಜನ್ ನಿಧನ; ಕಂಬನಿ ಮಿಡಿದ ಸೆಲೆಬ್ರಿಟಿಗಳು