HS Doreswamy Passed Away: ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ನಿಧನ

HS Doreswamy Death News: ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ (104) ಬುಧವಾರ ನಗರದಲ್ಲಿ ಹೃದಯಾಘಾತದಿಂದ ನಿಧನರಾದರು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದೊರೆಸ್ವಾಮಿ ಅವರಿಗೆ ಬಳಲಿಕೆ ಇತ್ತು.

HS Doreswamy Passed Away: ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ನಿಧನ
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Digi Tech Desk

Updated on:May 26, 2021 | 2:44 PM

ಬೆಂಗಳೂರು: ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ (104) ಬುಧವಾರ ನಗರದಲ್ಲಿ ಹೃದಯಾಘಾತದಿಂದ ನಿಧನರಾದರು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದೊರೆಸ್ವಾಮಿ ಅವರಿಗೆ ಬಳಲಿಕೆ ಇತ್ತು. ಮತ್ತೆ ಅಸ್ವಸ್ಥರಾದ ಕಾರಣ ಕೆಲ ದಿನಗಳ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ತಿಂಗಳಲ್ಲಿ 104ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು.

ದೊರೆಸ್ವಾಮಿ ನಿಧನದ ಸುದ್ದಿಯನ್ನು ಅವರ ಒಡನಾಡಿ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಫೇಸ್​ಬುಕ್ ಪೋಸ್ಟ್​ ಮೂಲಕ ಖಚಿತಪಡಿಸಿದ್ದಾರೆ. ‘ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾತ್ರಿಯಿಂದ ಆರೋಗ್ಯ ಸ್ವಲ್ಪ ಹದಗೆಟ್ಟು ಇಂದು ಬೆಳಿಗ್ಗೆ ಉಸಿರಾಟಕ್ಕೆ ತೊಂದರೆ ಆಗಿತ್ತು. ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಬಂದ ಸ್ವಲ್ಪ ಹೊತ್ತಿಗೆ ಹೃದಯಾಘಾತ ಆಯಿತು’ ಎಂದು ರವಿಕೃಷ್ಣಾರೆಡ್ಡಿ ಹೇಳಿದ್ದಾರೆ.

ದೊರೆಸ್ವಾಮಿ ಅವರು ತಮ್ಮ 19ನೇ ವಯಸ್ಸಿನಲ್ಲಿ ಲಲಿತಮ್ಮ ಅವರನ್ನು ಮದುವೆಯಾಗಿದ್ದರು. ಲಲಿತಮ್ಮ ಅವರು 2019ರ ಡಿಸೆಂಬರ್ 17ರಂದು ನಿಧನರಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಹೋರಾಟದ ಕಿಡಿ ದೊರೆಸ್ವಾಮಿ ಎಚ್​.ಎಸ್.ದೊರೆಸ್ವಾಮಿ ಅವರ ಪೂರ್ತಿ ಹೆಸರು ಹಾರೊಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ. ಏಪ್ರಿಲ್ 10, 1918ರಲ್ಲಿ ಜನಿಸಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬ್ರಿಟಿಷರ ಕಾಲದಲ್ಲಿ ಕನ್ನಡದದ ಜನಪ್ರಿಯ ಪತ್ರಿಕೆ ಎನಿಸಿದ್ದ ‘ಪೌರವಾಣಿ’ ವರದಿಗಾರರಾಗಿ ಜನಪ್ರಿಯರಾಗಿದ್ದರು. ಸಾಹಿತ್ಯ ಮಂದಿರದ ಮೂಲಕ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದರು. ಇತಿಹಾಸಕಾರ ರಾಮಚಂದ್ರ ಗುಹಾ ಅವರು ದೊರೆಸ್ವಾಮಿ ಅವರನ್ನು ಗೌರವಿಸುತ್ತಿದ್ದರು. ‘ದೊರೆಸ್ವಾಮಿ ಅಂದ್ರೆ ಕರ್ನಾಟಕದ ಸಾಕ್ಷಿಪ್ರಜ್ಞೆ’ ಎಂದು ಗುಹಾ ಬಣ್ಣಿಸಿದ್ದರು.

ಅಂದಿನ ಮೈಸೂರು ಪ್ರಾಂತ್ಯದಲ್ಲಿದ್ದ ಕನಕಪುರ ತಾಲ್ಲೂಕು ಹಾರೋಹಳ್ಳಿ ದೊರೆಸ್ವಾಮಿ ಅವರ ಜನ್ಮಸ್ಥಳ. ಕೇವಲ 5 ವರ್ಷದವರಿದ್ದಾಗ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡರು. ತಾತ ಶ್ಯಾನುಭೋಗ ಶಾಮಣ್ಣ ಅವರ ಪಾಲನೆಯಲ್ಲಿ ದೊರೆಸ್ವಾಮಿ ದೊಡ್ಡವರಾದರು. ದೊರೆಸ್ವಾಮಿ ಅವರ ಅಣ್ಣ ಸೀತಾರಾಮ್ ಬೆಂಗಳೂರಿನ ಮೇಯರ್ ಆಗಿದ್ದರು.

ವಿದ್ಯಾಭ್ಯಾಸ ಮುಗಿದ ನಂತರ ಜೂನ್ 1942ರಲ್ಲಿ ಬೆಂಗಳೂರಿನ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಅದೇ ವರ್ಷ ಆಗಸ್ಟ್​ ತಿಂಗಳಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಬ್ರಿಟಿಷರ ಆಡಳಿತಕ್ಕೆ ಧಕ್ಕೆ ತರುವ ಉದ್ದೇಶದಿಂದ ದಾಖಲೆಗಳನ್ನು ಸುಟ್ಟುಹಾಕಲೆಂದು ಪೋಸ್ಟ್​ಬಾಕ್ಸ್​ಗಳು ಮತ್ತು ರೆಕಾರ್ಡ್​ ರೂಮ್​ಗಳಲ್ಲಿ ಟೈಮ್​ಬಾಂಬ್​ಗಳನ್ನು ಸ್ಫೋಟಿಸಿದ್ದರು. ಕಾರ್ಮಿಕ ಚಳವಳಿಗಳಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದರು.

1943ರಲ್ಲಿ ದೊರೆಸ್ವಾಮಿ ಸಹಚರ ರಾಮಚಂದ್ರ ಪೊಲೀಸರ ಕೈಗೆ ಸಿಕ್ಕಿಬಿದ್ದ. ಆತ ನೀಡಿದ ಮಾಹಿತಿ ಆಧರಿಸಿ ಪೊಲೀಸರು ದೊರೆಸ್ವಾಮಿ ಅವರನ್ನ ಬಂಧಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಟ್ಟಿದ್ದರು. ಬಹುಕಾಲ ಬಂಧನಲ್ಲಿದ್ದರೂ ದೊರೆಸ್ವಾಮಿಯನ್ನು ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಲಿಲ್ಲ. ಜೈಲಿನಲ್ಲಿದ್ದ ಅವಧಿಯಲ್ಲಿ ದೊರೆಸ್ವಾಮಿ ಹಿಂದಿ ಮತ್ತು ತಮಿಳು ಕಲಿತರು. 14 ತಿಂಗಳ ಜೈಲುವಾಸದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಜೈಲಿನಿಂದ ಬಿಡುಗಡೆಯಾದ ನಂತರ ಸಾಹಿತ್ಯ ಮಂದಿರ ಹೆಸರಿನ ಪ್ರಕಾಶನ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದರು. ಗೆಳೆಯನೊಬ್ಬನ ಅಂತಿಮ ಕೋರಿಕೆಯಂತೆ ಪೌರವಾಣಿ ಪತ್ರಿಕೆಯ ಸಂಪಾದಕೀಯ ಹೊಣೆ ಹೊತ್ತರು. 1947ರಲ್ಲಿ ಮೈಸೂರು ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಬೇಕೆಂದು ನಡೆದ ಚಳವಳಿಯಲ್ಲಿಯೂ ದೊರೆಸ್ವಾಮಿ ಮಹತ್ವದ ಪಾತ್ರ ನಿರ್ವಹಿಸಿದರು. ಈ ಅವಧಿಯಲ್ಲಿ ಮೈಸೂರು ಸಂಸ್ಥಾನದಲ್ಲಿ ಪೌರವಾಣಿಗೆ ನಿರ್ಬಂಧ ಹೇರಿದ್ದರಿಂದ ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ಹಿಂದೂಪುರದಿಂದ ಪೌರವಾಣಿಯನ್ನು ದೊರೆಸ್ವಾಮಿ ಮುದ್ರಿಸಿ, ಮೈಸೂರು ಸಂಸ್ಥಾನಕ್ಕೆ ತರಿಸುವ ಸಾಹಸ ಮಾಡಿದ್ದರು.

ಸ್ವಾತಂತ್ರ್ಯಾನಂತರವೂ ದೊರೆಸ್ವಾಮಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿಯೇ ಉಳಿದರು. 1950ರಲ್ಲಿ ನಡೆದ ಭೂದಾನ ಚಳವಳಿ, ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಪಾಲ್ಗೊಂಡರು. ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿ ವಿರೋಧಿಸಿ ನಡೆದ ಹೋರಾಟದಲ್ಲಿ ಪಾಲ್ಗೊಂಡು, ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಕಟುವಾಗಿ ಟೀಕಿಸಿದ್ದರು. ದೇಶದ ಸ್ವಾತಂತ್ರ್ಯ ಉಳಿಯಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರಬಾರದು ಎಂದು ಪ್ರತಿಪಾದಿಸುತ್ತಿದ್ದ ಅವರು ಹಲವು ಕಾರಣಗಳಿಗಾಗಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು.

ಹಲವು ಗೌರವ ಕರ್ನಾಟಕದ ಉದ್ದಗಲಕ್ಕೂ ಮನೆಮಾತಾಗಿರುವ ದೊರೆಸ್ವಾಮಿ ಅವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳು ಒಲಿದಿವೆ. ಈ ಪೈಕಿ 2017ರಲ್ಲಿ ಗಾಂಧಿ ಸೇವಾ ಪುರಸ್ಕಾರ, 2018ರಲ್ಲಿ ಬಸವ ಪುರಸ್ಕಾರ ಪ್ರಮುಖವಾದುದು. 2019ರಲ್ಲಿ ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪುರಸ್ಕಾರವನ್ನು ಜೀವಮಾನ ಸಾಧನೆಗಾಗಿ ನೀಡಿ ಗೌರವಿಸಲಾಗಿತ್ತು.

(Freedom Fighter HS Doreswamy Died of Heart Attack in Bengaluru)

ಇದನ್ನೂ ಓದಿ: ಸರ್ಕಾರದ ಮೊಂಡುತನ ಹೆಚ್ಚು ದಿನ ನಡೆಯದು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ

ಇದನ್ನೂ ಓದಿ: Explainer: ಭಾರತದ ರಾಜ್ಯಗಳಿಗೆ ನೇರ ಲಸಿಕೆ ಪೂರೈಕೆಗೆ ಫೈಜರ್, ಮಾಡೆರ್ನಾ ನಕಾರ; ಕೊವಿಡ್ ವಿರುದ್ಧದ ಹೋರಾಟಕ್ಕೆ ಮತ್ತೊಂದು ವಿಘ್ನ

Published On - 1:57 pm, Wed, 26 May 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್