ಕನ್ನಡ ಪ್ರೇಕ್ಷಕರ ನಿರ್ಲಕ್ಷ್ಯ, ತಮಿಳು ಪ್ರೇಕ್ಷಕರ ಅಪ್ಪುಗೆ ಪಡೆದ ಕನ್ನಡ ಸಿನಿಮಾ

Second case of Seetharam: ಕನ್ನಡದ ಕೆಲವು ಸ್ಟಾರ್ ನಟರ ಕನ್ನಡ ಸಿನಿಮಾಗಳು ಪರಭಾಷೆಯಲ್ಲಿ ಅಟ್ಟರ್ ಫ್ಲಾಪ್ ಆದ ಉದಾಹರಣೆಯೂ ಇದೆ. ಆದರೆ ಇದೀಗ ಕನ್ನಡದ ಸಿನಿಮಾ ಒಂದು ನೆರೆಯ ತಮಿಳುನಾಡಿನಲ್ಲಿ ಸದ್ದು ಮಾಡಲು ಆರಂಭಿಸಿದೆ. ಆದರೆ ಇದು ಸಂತೋಷ ಪಡಬೇಕಾದ ಸುದ್ದಿಯೋ ಅಥವಾ ಬೇಸರ ಪಟ್ಟುಕೊಳ್ಳಬೇಕಾದ ಸುದ್ದಿಯೋ ಗೊಂದಲದಲ್ಲಿದೆ ಚಿತ್ರತಂಡ.

ಕನ್ನಡ ಪ್ರೇಕ್ಷಕರ ನಿರ್ಲಕ್ಷ್ಯ, ತಮಿಳು ಪ್ರೇಕ್ಷಕರ ಅಪ್ಪುಗೆ ಪಡೆದ ಕನ್ನಡ ಸಿನಿಮಾ
Second Case Of Seetaram

Updated on: Mar 03, 2026 | 5:26 PM

ಕನ್ನಡದ ದೊಡ್ಡ ಬಜೆಟ್ ಪ್ಯಾನ್ ಇಂಡಿಯಾ (Pan India) ಸಿನಿಮಾಗಳು ಅಥವಾ ಸುದೀಪ್, ಯಶ್, ದರ್ಶನ್ ಅಂಥಹಾ ದೊಡ್ಡ ನಟರ ಸಿನಿಮಾಗಳಷ್ಟೆ ರಾಜ್ಯದ ಗಡಿ ದಾಟಿ ಹೊರ ರಾಜ್ಯಗಳಲ್ಲಿ ಪ್ರದರ್ಶನ ಕಾಣುತ್ತವೆ. ಅದರಲ್ಲೂ ಸಿನಿಮಾ ಚೆನ್ನಾಗಿದ್ದರಷ್ಟೆ ಪರಭಾಷೆ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ. ಕನ್ನಡದ ಕೆಲವು ಸ್ಟಾರ್ ನಟರ ಕನ್ನಡ ಸಿನಿಮಾಗಳು ಪರಭಾಷೆಯಲ್ಲಿ ಅಟ್ಟರ್ ಫ್ಲಾಪ್ ಆದ ಉದಾಹರಣೆಯೂ ಇದೆ. ಆದರೆ ಇದೀಗ ಕನ್ನಡದ ಸಿನಿಮಾ ಒಂದು ನೆರೆಯ ತಮಿಳುನಾಡಿನಲ್ಲಿ ಸದ್ದು ಮಾಡಲು ಆರಂಭಿಸಿದೆ. ಆದರೆ ಇದು ಸಂತೋಷ ಪಡಬೇಕಾದ ಸುದ್ದಿಯೋ ಅಥವಾ ಬೇಸರ ಪಟ್ಟುಕೊಳ್ಳಬೇಕಾದ ಸುದ್ದಿಯೋ ಗೊಂದಲದಲ್ಲಿದೆ ಚಿತ್ರತಂಡ.

ವಿಜಯ್ ರಾಘವೇಂದ್ರ ನಟಿಸಿರುವ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾ ವಾರದ ಹಿಂದಷ್ಟೆ ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಸಿನಿಮಾ ಪ್ರೇಮಿಗಳು, ಸಿನಿಮಾ ನೋಡಿದವರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಆದರೆ ಈ ಹಿಂದಿನ ಕನ್ನಡದ ಕೆಲ ಒಳ್ಳೆಯ ಸಿನಿಮಾಗಳಿಗೆ ಆದ ಗತಿಯೇ ಈ ಸಿನಿಮಾಕ್ಕೂ ಆಗಿದೆ. ಸಿನಿಮಾವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ. ಆದರೆ ನೆರೆಯ ತಮಿಳುನಾಡಿನಲ್ಲಿ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾಕ್ಕೆ ಬೆಂಗಳೂರಿನಲ್ಲಿ ಪ್ರಸ್ತುತ ಕೆಲವೇ ಚಿತ್ರಮಂದಿರಗಳಲ್ಲಿ ಕೆಲವೇ ಶೋಗಳಷ್ಟೆ ಲಭ್ಯವಿದೆ. ಅದೂ ಇತ್ತೀಚೆಗಷ್ಟೆ ಕೆಲವು ಶೋಗಳು ಹೆಚ್ಚುವರಿಯಾಗಿ ನೀಡಲಾಗಿದೆ. ಅತ್ತ ತಮಿಳುನಾಡಿನಲ್ಲಿ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾವು ದಿನದಿಂದ ದಿನಕ್ಕೆ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಬುಕ್​ಮೈಶೋ ಮಾಹಿತಿಯಂತೆ ಚೆನ್ನೈನಲ್ಲಿ ನಾಳೆ (ಮಾರ್ಚ್ 03) ಸಿನಿಮಾಕ್ಕೆ ನಾಲ್ಕು ಚಿತ್ರಮಂದಿರಗಳಲ್ಲಿ ಐದು ಶೋಗಳು ನಿಗದಿ ಆಗಿವೆ. ಸಣ್ಣ ಬಜೆಟ್​​ನ ಕನ್ನಡ ಸಿನಿಮಾ ಕೇವಲ ತನ್ನ ಕಂಟೆಂಟ್ ಒಂದಿರಂದಲೇ ಪರರಾಜ್ಯದಲ್ಲಿ ಶೋಗಳನ್ನು ಗಿಟ್ಟಿಸಿಕೊಳ್ಳುತ್ತಿರುವುದು ಸಾಮಾನ್ಯ ಸಂಗತಿಯಲ್ಲ.

ಇದನ್ನೂ ಓದಿ:ವಿಜಯ್ ರಾಘವೇಂದ್ರ ಟಾರ್ಚರ್​​ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು

ಐದು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಸೀತಾರಾಮ್ ಬಿನೋಯ್’ ಸಿನಿಮಾದ ಎರಡನೇ ಭಾಗ ಇದಾಗಿದೆ. ಸಿನಿಮಾ ನೋಡಿದವರು ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ಚೆನ್ನಾಗಿ ಮೂಡಿ ಬಂದಿದೆ ಎಂಬ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆ ಆಗಿದ್ದು, ಹೆಚ್ಚುವರಿ ದೃಶ್ಯಗಳಿಲ್ಲದೆ ಬಹಳ ಗಟ್ಟಿಯಾದ ಚಿತ್ರಕತೆಯನ್ನು ಸಿನಿಮಾ ಹೊಂದಿದೆ. ನಿರ್ದೇಶಕ, ನಿರ್ಮಾಪಕರೂ ಆಗಿರುವ ಪವನ್ ಒಡೆಯರ್ ಅವರು ಈ ಸಿನಿಮಾವನ್ನು ತಮಿಳುನಾಡಿನಲ್ಲಿ ವಿತರಣೆ ಮಾಡಿದ್ದು, ತಮಿಳುನಾಡಿನಲ್ಲಿ ಸಿನಿಮಾ ಪಡೆದುಕೊಳ್ಳುತ್ತಿರುವ ಪ್ರತಿಕ್ರಿಯೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇವಿಪ್ರಸಾದ್ ಶೆಟ್ಟಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us