ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸೀತಾ ರಾಮ’ ಧಾರಾವಾಹಿ (Seetha Raama) ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದೆ. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಪೂಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಅಶೋಕ್ ಸೇರಿ ಅನೇಕರು ಪ್ರಮುಖ ಪಾತ್ರ ಮಾಡಿದ್ದಾರೆ. ಈಗ ‘ಸೀತಾ ರಾಮ’ ತಂಡ ಮಲಯಾಳಂನತ್ತ ಮುಖ ಮಾಡಿದೆ! ಹೌದು, ಹೀಗೊಂದು ಅಪ್ಡೇಟ್ ಮಲಯಾಳಂ ಕಿರುತೆರೆಯಿಂದ ಸಿಕ್ಕಿದೆ. ಅಷ್ಟಕ್ಕೂ ಏನಿದು ಸಮಾಚಾರ? ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಸೀತಾ ರಾಮ’ ಧಾರಾವಾಹಿ ಇತ್ತೀಚಿಗಷ್ಟೇ 200 ಎಪಿಸೋಡ್ಗಳನ್ನು ಪೂರ್ಣಗೊಳಿಸಿದೆ. ರಾಮ್ ಹಾಗೂ ಸೀತಾ ಮಧ್ಯೆ ಪ್ರೀತಿ ಮೂಡಿದೆ. ಇದಕ್ಕೆ ಸಿಹಿ ಸೇತುವೆ ಆಗಿದ್ದಾಳೆ. ಈ ಕಥೆ ಪ್ರಮುಖ ತಿರುವುಗಳನ್ನು ತೆಗೆದುಕೊಂಡು ಸಾಗುತ್ತಿದೆ. ವಿಶೇಷ ಎಂದರೆ ‘ಸೀತಾ ರಾಮ’ ಧಾರಾವಾಹಿ ಮಲಯಾಳಂಗೆ ಡಬ್ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಜೀ ಕೇರಳಂನಲ್ಲಿ ಈ ಧಾರಾವಾಹಿ ಪ್ರಸಾರ ಕಾಣಲಿದೆ.
ಅಂದಹಾಗೆ, ‘ಸೀತಾ ರಾಮ’ ಧಾರಾವಾಹಿ ಮರಾಠಿಯ ‘ಮಜಿ ತುಜಿ ರೇಶಿಮಘಡ’ ಧಾರಾವಾಹಿಯ ರಿಮೇಕ್ ಆಗಿದೆ. ಈ ಧಾರಾವಾಹಿ 2021ರಲ್ಲಿ ಪ್ರಸಾರ ಕಂಡು ಮೆಚ್ಚುಗೆ ಪಡೆದಿತ್ತು. ಇದರ ಕಥೆಯನ್ನು ಕನ್ನಡಕ್ಕೆ ಬೇಕಾದಂತೆ ಬದಲಿಸಿ ರಿಮೇಕ್ ಮಾಡಲಾಗಿತ್ತು. ಈಗ ಕನ್ನಡದ ಧಾರಾವಾಹಿ ಮಲಯಾಳಂಗೆ ಡಬ್ ಆಗಿದೆ ಅನ್ನೋದು ವಿಶೇಷ. ಜೀ ಕನ್ನಡದಲ್ಲಿ ಪ್ರಸಾರ ಕಂಡು ಸೂಪರ್ ಹಿಟ್ ಆದ ‘ಗಟ್ಟಿಮೇಳ’ ಧಾರಾವಾಹಿ ಮಲಯಾಳಂಗೆ ‘ಪರಿಣಯಮ್’ ಎಂದು ಡಬ್ ಆಗಿ ಪ್ರಸಾರ ಕಾಣುತ್ತಿದೆ.
ಇದನ್ನೂ ಓದಿ: ಹಿಂದಿಗೆ ರಿಮೇಕ್ ಆಗ್ತಿದೆ ಕನ್ನಡದ ‘ಸೀತಾ ರಾಮ’ ಧಾರಾವಾಹಿ; ಪ್ರೋಮೋ ವೈರಲ್
ಇತ್ತೀಚೆಗೆ ರಿಮೇಕ್ ಜೊತೆ ಧಾರಾವಾಹಿಗಳನ್ನು ಬೇರೆ ಭಾಷೆಗೆ ಡಬ್ ಮಾಡುವ ಟ್ರೆಂಡ್ ಕೂಡ ಜೋರಾಗಿದೆ. ಪರಭಾಷೆಯ ಅನೇಕ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರ ಕಾಣುತ್ತವೆ. ಈ ವೇಳೆ ಸಂಸ್ಕೃತಿ ವ್ಯತ್ಯಾಸ ಉಂಟಾದ ಬಗ್ಗೆ ಅನೇಕರು ಟೀಕೆ ಮಾಡಿದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.